ಚುನಾವಣೆ ಎಂದರೆ ಸಾಕು ರಾಜಕೀಯ ಪಕ್ಷಗಳಿಗೆ ಹಬ್ಬವಿದ್ದಂತೆ. ಜನರನ್ನು ಮತದಾನಕ್ಕೆ ಸೆಳೆಯಲು ಅವರು ಮಾಡುವ ಕಸರತ್ತು ಯಾವುದೇ ಯುದ್ಧಕ್ಕಿಂತ ಕಡಿಮೆ ಇಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪಕ್ಷ ಮತ್ತೊಂದು ಪಕ್ಷ ಕಾಲೆಳೆಯುವುದು, ಮೀಮ್ಸ್ ಸೃಷ್ಟಿಸುವುದು ಸಾಮಾನ್ಯವಾಗಿದೆ. ಜತೆಗೆ ಬಹುತೇಕರಿಗೆ ಮನರಂಜನೆ ಆಗಿದೆ ಕೂಡ. ಅಂಥದ್ದೇ ಮನರಂಜನೆಯನ್ನು ಆಮ್ ಆದ್ಮಿ ಪಕ್ಷ (ಆಪ್) ಪಂಜಾಬಿನ ಸಿಎಂ ಅಭ್ಯರ್ಥಿ ಘೋಷಣೆ ವೇಳೆ ಟ್ವಿಟರ್ನಲ್ಲಿ ಜನರಿಗೆ ಉಣಬಡಿಸಿದೆ.
ಪಂಜಾಬಿನಲ್ಲಿ ತನ್ನ ಸಿಎಂ ಅಭ್ಯರ್ಥಿಯಾಗಿ ಸಂಗ್ರೂರ್ ಸಂಸದ ಭಗವಂತ್ ಮಾನ್ ಅವರನ್ನು ಫೋನ್ ಮೂಲಕ ಜನರಿಂದ ಸಂಗ್ರಹಿಸಲಾದ ಜನಾಭಿಪ್ರಾಯ ಆಧರಿಸಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆಯ್ಕೆ ಮಾಡಿದ್ದಾರೆ.
ಅದಾದ ಕೆಲವೇ ನಿಮಿಷಗಳಲ್ಲಿ ಬಾಲಿವುಡ್ ಹಾಡೊಂದರಲ್ಲಿ ತಾರಾ ನಟರ ಮುಖಗಳಿಗೆ ರಾಹುಲ್ ಗಾಂಧಿ, ಸಿಧು ಮುಖಗಳನ್ನು ಅಂಟಿಸಿ, ಕೊನೆಗೆ ಶಾರುಖ್ ಖಾನ್ ಮುಖದ ಜಾಗದಲ್ಲಿ ತನ್ನ ಸಿಎಂ ಅಭ್ಯರ್ಥಿ ಮಾನ್ ಫೋಟೊವನ್ನು ಹಾಕಿ ಕುಹಕದ ಟ್ವೀಟ್ವೊಂದನ್ನು ಆಪ್ ಮಾಡಿದೆ.
ಈ ಬಾಲಿವುಡ್ ಸಾಂಗ್ ’’ಹೇ ಬೇಬಿ’’ ಎಂಬ ಸಿನಿಮಾದ ’’ದಿಲ್ ದಾ ಮಾಮಲಾ ಹೈ ದಿಲ್ಭರ್’’ ಎಂಬ ಜನಪ್ರಿಯ ಸಾಂಗ್ ಆಗಿದೆ. ಇದರಲ್ಲಿ ಅಕ್ಷಯ್ ಕುಮಾರ್ ಮುಖಕ್ಕೆ ಪಂಜಾಬ್ ಸಿಎಂ ಚನ್ನಿ ಮುಖವನ್ನು, ರಿತೇಶ್ ದೇಶಮುಖ್ ಮುಖದ ಜಾಗದಲ್ಲಿ ನವಜೋತ್ ಸಿಂಗ್ ಸಿಧು ಮುಖವನ್ನು ಲಗತ್ತಿಸಲಾಗಿದೆ. ಒಟ್ಟಿನಲ್ಲಿ ಇವರೆಲ್ಲರೂ ನಟಿ ವಿದ್ಯಾಬಾಲನ್ ಅವರ ಗಮನ ಸೆಳೆಯಲು ಒಳ್ಳೆಯ ಡ್ಯಾನ್ಸ್ ಮಾಡುವ ದೃಶ್ಯ ಸಿನಿಮಾದಲ್ಲಿದೆ.
ಕೊನೆಗೆ ಬಾಲನ್ ಆಯ್ಕೆ ಮಾಡಿಕೊಳ್ಳುವುದು ಶಾರುಖ್ ಖಾನ್ ಅವರನ್ನು ಆದಕಾರಣ, ಖಾನ್ ಫೋಟೊಗೆ ಮಾನ್ ಅವರ ಮುಖವನ್ನು ಲಗತ್ತಿಸಲಾಗಿದೆ.
‘ಯಾರು ಏನೇ ಕಸರತ್ತು ಮಾಡಿದರೂ ಕೂಡ ಪಂಜಾಬ್ ಜನರಿಗೆ ಮಾನ್ ಅತ್ಯಂತ ನೆಚ್ಚಿನ ಸಿಎಂ ಅಭ್ಯರ್ಥಿ’ ಎನ್ನುವುದನ್ನು ಈ ಕುಹಕ ಮಿಶ್ರಿತ ಫೋಟೊ ಟ್ವೀಟ್ ಮೂಲಕ ಆಪ್ ಹೇಳಲು ಬಯಸಿದೆ.