ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಧಾನಸಭೆ ಸಂಕೀರ್ಣದ ಗಾಂಧಿ ಪ್ರತಿಮೆ ಬಳಿ ಎಎಪಿ ಶಾಸಕರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ದೆಹಲಿ ವಿಧಾನಸಭೆ ಪ್ರತಿಭಟನೆಗೆ ಸಾಕ್ಷಿಯಾಗುತ್ತಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ವಿರೋಧ ಪಕ್ಷ ಬಿಜೆಪಿ ಪರಸ್ಪರ ಭ್ರಷ್ಟಾಚಾರದ ಆರೋಪ ಹೊರಿಸಿ ರಾತ್ರೋರಾತ್ರಿ ಧರಣಿ ನಡೆಸುತ್ತಿವೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2016 ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷರಾಗಿದ್ದಾಗ, ಅವರು ತಮ್ಮ ಉದ್ಯೋಗಿಗಳಿಗೆ 1,400 ಕೋಟಿ ರೂ. ಮೌಲ್ಯದ ನೋಟುಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು ಎಂದು ಎಎಪಿ ಶಾಸಕರು ಆರೋಪಿಸಿದ್ದಾರೆ.
ಮತ್ತೊಂದೆಡೆ, ಬಿಜೆಪಿ ಶಾಸಕರು ಭ್ರಷ್ಟಾಚಾರದ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಂಪುಟ ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಎಎಪಿ ಶಾಸಕರು ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತರೆ, ಬಿಜೆಪಿ ಶಾಸಕರು ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರ ಪ್ರತಿಮೆಗಳ ಬಳಿ ವಿಧಾನಸಭೆ ಮೈದಾನದಲ್ಲಿ ಧರಣಿ ಆರಂಭಿಸಿದ್ದಾರೆ.
ಎಎಪಿ ಶಾಸಕರು ಹಾಡುಗಳನ್ನು ಹಾಡುವುದು, ಘೋಷಣೆಗಳನ್ನು ಕೂಗುವುದು ಮತ್ತು ಎಲ್.ಜಿ. ಸಕ್ಸೆನಾ ವಿರುದ್ಧ ಕ್ರಮಕ್ಕೆ ಕರೆ ನೀಡುವ ಫಲಕಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ.