
ಎರಡು ದಿನಗಳ ಹಿಂದೆ ಪಂಜಾಬ್ ಆಪ್ ನಾಯಕ, ಉದ್ಯಮಿ ಅಲೋಖ್ ಮಿತ್ತಲ್ ಹಾಗೂ ಪತ್ನಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದರೋಡೆಕೋರರು ದಾಳಿ ನಡೆಸಿ, ಅಲೋಖ್ ಮಿತ್ತಲ್ ಪತ್ನಿ ಲಿಪ್ಸಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಘಟನೆ ಬೆಳಕಿಗೆ ಬಂದಿತ್ತು.
ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಲಿಪ್ಸಿ ಕೊಲೆಗೆ ಪತಿ ಅನೋಖ್ ಮಿತ್ತಲ್ ಸುಪಾರಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಲುಧಿಯಾನ ಪೊಲೀಸರು ಅನೋಖ್ ಮಿತ್ತಲ್ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ.
ಅಲ್ಲದೇ ಸುಪಾರಿ ಪಡೆದುಕೊಂಡಿದ್ದ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಿತ್ತಲ್ ತನ್ನ ಪ್ರೇಯಸಿ ಸಹಾಯದಿಂದ ಪತ್ನಿ ಲಿಪ್ಸಿ ಕೊಲೆ ಮಾಡಿಸಲು ಕೊಲೆಗಾರರನ್ನು ನೇಮಕ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪತ್ನಿ ಕೊಲೆಗೆ 2.50 ಲಕ್ಷ ನೀಡಲು ಒಪ್ಪಿದ್ದ. ಮುಂಗಡವಾಗಿ ಮಿತ್ತಲ್ 50 ಸಾವಿರ ರೂ ಪಾವತಿಸಿದ್ದ. ಉಳಿದ 2 ಲಕ್ಷ ರೂಪಾಯಿ ಕೊಲೆ ಬಳಿಕ ನೀಡುವುದಾಗಿ ಹೇಳಿದ್ದ ಎಂದು ಲುಧಿಯಾನ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.