ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್, ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಮುಂಬೈನ ನಿವಾಸದ ಹೊರಗೆ ಭಾನುವಾರ ರಾತ್ರಿ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದಾರೆ. ರೀನಾ ಅವರನ್ನು ಭೇಟಿ ಮಾಡುವಾಗ ಅಮೀರ್ ಧೋತಿ ಪ್ಯಾಂಟ್ ಮತ್ತು ಟಿ-ಶರ್ಟ್ ಧರಿಸಿದ್ದರು. ಇವರು ಧರಿಸಿದ ಉಡುಗೆಗೆ ನೆಟ್ಟಿಗರು ಸಖತ್ ಟ್ರೋಲ್ ಮಾಡಿದ್ದಾರೆ.
ಅಮೀರ್ ಖಾನ್ ಅವರ ವಿಚಿತ್ರ ಉಡುಗೆಗೆ ನೆಟ್ಟಿಗರು ಕಾಲೆಳೆದಿದ್ದಾರೆ. ನಟ ರಣವೀರ್ ಸಿಂಗ್ ಜೊತೆ ಕಾಲ ಕಳೆದ ನಂತರ ಇವರ ಉಡುಪು ಕೂಡ ಬದಲಾಯಿತು ಅಂತೆಲ್ಲಾ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇನ್ನೂ ಕೆಲವರು ಅಮೀರ್ ಆಕೆಯ ಸೆಲ್ವಾರ್ ಅನ್ನು ಏಕೆ ಧರಿಸಿದ್ದಾರೆ ಎಂದೆಲ್ಲಾ ಲೇವಡಿ ಮಾಡಿದ್ದಾರೆ.
ತಮ್ಮ ಹದಿಹರೆಯದ ವರ್ಷಗಳಲ್ಲಿ ನೆರೆಹೊರೆಯವರಾಗಿದ್ದ ಅಮೀರ್ ಮತ್ತು ರೀನಾ ಏಪ್ರಿಲ್ 18, 1986 ರಂದು ವಿವಾಹವಾಗಿದ್ದರು. ಮಾಜಿ ದಂಪತಿಗೆ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.
ರೀನಾ ಮತ್ತು ತಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರವೂ, ನಮ್ಮ ಕುಟುಂಬವು ಎಂದಿನಂತೆ ನಿಕಟವಾಗಿದೆ. ಮೂವರು ಮಹಿಳೆಯರು ತನ್ನ ಜೀವನದ ಪ್ರಮುಖ ಭಾಗವಾಗಿದ್ದಾರೆ. ತನ್ನ ತಾಯಿ, ರೀನಾ ಮತ್ತು ಕಿರಣ್ ತನ್ನ ಜೀವನದ ಭಾಗವಾಗಿರುವುದಾಗಿ ಈ ಹಿಂದೆ ಸಂದರ್ಶನವೊಂದರಲ್ಲಿ ಅಮೀರ್ ತಿಳಿಸಿದ್ದರು.
ಇನ್ನು ಡಿಸೆಂಬರ್ 2005 ರಲ್ಲಿ, ಅಮೀರ್ ನಿರ್ಮಾಪಕಿ-ನಿರ್ದೇಶಕಿ ಕಿರಣ್ ಅವರನ್ನು ವಿವಾಹವಾಗಿದ್ದರು. 15 ವರ್ಷಗಳ ಸುದೀರ್ಘ ದಾಂಪತ್ಯದ ನಂತರ ಆಗಸ್ಟ್ 2021 ರಲ್ಲಿ ಪ್ರತ್ಯೇಕವಾದ್ರು. ಇಬ್ಬರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ.