ಬೆಂಗಳೂರು: ರಾಷ್ಟ್ರೀಯ ಸುದ್ದಿ ವಾಹಿನಿ ಆಜ್ ತಕ್ ಹಾಗೂ ವಾಹಿನಿಯ ಮುಖ್ಯ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆಜ್ ತಕ್ ಸುದ್ದಿ ವಾಹಿನಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆಜ್ ತಕ್ ಸುದ್ದಿವಾಹಿನಿ, ವಾಹಿನಿಯ ಪ್ರಧಾನ ಸಂಪಾದಕ ಸುಧೀರ್ ಚೌಧರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸಹಾಯಕ ಆಡಳಿತಾಧಿಕಾರಿ ಶಿವಕುಮಾರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕಿಗೆ ಆಟೋ, ಟ್ಯಾಕ್ಸಿ ಖರೀದಿಗೆ ಗರಿಷ್ಠ 3 ಲಕ್ಷವರೆಗೆ ಸಬ್ಸಿಡಿ ನೀಡುವ ಯೋಜನೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ ಅವರು ಅಭಿವೃದ್ಧಿ ನಿಗಮ, ಅಂಬೆಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿಯೂ ಇದೆ. ಅಲ್ಪಸಂಖ್ಯಾತ ಸಮುದಾಯ ಅಷ್ಟೇ ಅಲ್ಲ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿ ಹಿಂದೂ ಸಮುದಾಯದ ನಿರುದ್ಯೋಗಿ ಯುವಕರಿಗೂ ಅನುಷ್ಠಾನದಲ್ಲಿದೆ. ವಾಹಿನಿಯಲ್ಲಿ ಇದನ್ನು ತಿರುಚಿ ಈ ಯೋಜನೆಗಳು ಕೇವಲ ಮುಸ್ಲಿಂ ಸಮುದಾಯಕ್ಕಷ್ಟೇ ಜಾರಿಯಲ್ಲಿದೆ. ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸೆ.11ರಂದು ವರದಿ ಪ್ರಸಾರ ಮಾಡಲಾಗಿದೆ. ಸಮಾಜದಲ್ಲಿ ಕೋಮು ಭಾವನೆ ಮೂಡಿಸುವ ದುರುದ್ದೇಶದಿಂದ ವರದಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪಪ್ರಚಾರ ಆರೋಪದ ಹಿನ್ನೆಲೆಯಲ್ಲಿ ಸುಧೀರ್ ಚೌಧರಿ ವಿರುದ್ಧ ಪ್ರಕರಣ ದಾಖಲಾಗಿದೆ.