ಇಡೀ ದೇಶವನ್ನೇ ಆತಂಕಕ್ಕೆ ದೂಡಿದ್ದ ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಯಲಾಗ್ತಿವೆ.
ಆರೋಪಿ ಅಫ್ತಾಬ್ ಪೂನಾವಾಲಾ, ತನ್ನ ಲಿವ್ ಇಲ್ ರಿಲೇಷನ್ ಶಿಪ್ ಗೆಳತಿ ಶ್ರದ್ಧಾ ವಾಕರ್ ಮೂಳೆಗಳನ್ನ ಗ್ರೈಂಡರ್ ನಲ್ಲಿ ಪುಡಿ ಮಾಡಿದ್ದ. ಬಳಿಕ ಅದನ್ನ ಪುಡಿ ರೂಪದಲ್ಲಿ ವಿಲೇವಾರಿ ಮಾಡಿದ್ದ ಎನ್ನುವುದು ಬಯಲಾಗಿದೆ.
ಶ್ರದ್ಧಾ ಹತ್ಯೆ ಬಳಿಕ ಆತ ಎಸೆದ ಕೊನೆಯ ತುಣುಕು ಆಕೆಯ ತಲೆಯಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಸಲ್ಲಿಸಿರುವ 6,600 ಪುಟಗಳ ಚಾರ್ಜ್ ಶೀಟ್ ನಲ್ಲಿ ಇಂತಹ ಭಯಾನಕ ಅಂಶಗಳನ್ನ ಹೇಳಲಾಗಿದೆ. ಮೇ 18 ರಂದು ಶ್ರದ್ಧಾಳನ್ನು ಕೊಂದ ನಂತರ, ಪೂನಾವಾಲಾ ಜೊಮಾಟೊ ಚಿಕನ್ ರೋಲ್ ಆರ್ಡರ್ ಮಾಡಿ ತಿಂದಿದ್ದ ಎನ್ನುವುದು ಸಹ ಉಲ್ಲೇಖವಾಗಿದೆ.
ಆರೋಪಿ ಮೊದಲಿಗೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಿಲೇವಾರಿ ಮಾಡಲು ಯೋಚಿಸಿದ್ದ. ಅದಕ್ಕಾಗಿ ಅವನು ಒಂದು ಚೀಲವನ್ನು ಸಹ ಖರೀದಿಸಿದ್ದ. ಆದರೆ ತಕ್ಷಣ ಸಿಕ್ಕಿಬೀಳುತ್ತೇನೆಂದು ಭಾವಿಸಿ ಆ ಆಲೋಚನೆಯನ್ನು ಕೈಬಿಟ್ಟಿದ್ದಾಗಿ ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ. ಅಂತಿಮವಾಗಿ ಅವನು ಶ್ರದ್ಧಾ ದೇಹವನ್ನು ಕತ್ತರಿಸಲು ನಿರ್ಧರಿಸಿ ಅದಕ್ಕಾಗಿ ಗರಗಸ, ಸುತ್ತಿಗೆ ಮತ್ತು ಮೂರು ಚಾಕುಗಳನ್ನು ಖರೀದಿಸಿದ. ನಂತರ ಬೆರಳುಗಳನ್ನು ಬೇರ್ಪಡಿಸಲು ಬ್ಲೋ ಟಾರ್ಚ್ ಅನ್ನು ಬಳಸಿದ್ದ ಎನ್ನಲಾಗಿದೆ.
ಬಳಿಕ 35 ತುಂಡುಗಳಾಗಿ ಕತ್ತರಿಸಿದ ದೇಹವನ್ನು ಫ್ರಿಡ್ಜ್ ನಲ್ಲಿ ಇರಿಸಲಾಗಿತ್ತು. ಪೂನಾವಾಲಾ ತನ್ನ ಗೆಳತಿಯರು ಭೇಟಿ ನೀಡಿದಾಗಲೆಲ್ಲ ಫ್ರಿಡ್ಜ್ ನಿಂದ ಪೊಟ್ಟಣಗಳನ್ನು ತೆಗೆದುಕೊಂಡು ಅಡುಗೆ ಮನೆಯಲ್ಲಿ ಇಡುತ್ತಿದ್ದ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಪೂನಾವಾಲಾ ಶ್ರದ್ಧಾ ವಾಲ್ಕರ್ ಅವರ ಮೊಬೈಲ್ ಅನ್ನು ಇಟ್ಟುಕೊಂಡಿದ್ದ. ಮೇ 18 ರ ನಂತರ ಆಕೆಯ ಖಾತೆಯು ಆತನ ಫೋನ್‌ನಿಂದ ಚಾಲನೆಯಾಗುತ್ತಿತ್ತು ಎಂದು ಗೂಗಲ್ ಡೇಟಾ ಬಹಿರಂಗಪಡಿಸಿದೆ. ನಂತರ ಮುಂಬೈನಲ್ಲಿ ಆಕೆಯ ಸೆಲ್‌ಫೋನ್ ಮತ್ತು ಲಿಪ್‌ಸ್ಟಿಕ್ ಅನ್ನು ವಿಲೇವಾರಿ ಮಾಡಿದ್ದಾನೆ ಎಂದು ಆರೋಪಪಟ್ಟಿ ಹೇಳುತ್ತದೆ.