ಬೆಳಗಾವಿ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಮಹಾರಾಷ್ಟ್ರದ ಮಾಜಿ ಸಚಿವ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಒತ್ತಾಯಿಸಿರುವುದಕ್ಕೆ ರಾಜ್ಯ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕದಿಂದ ಬೆಳಗಾವಿ ಬೇರ್ಪಡಿಸುವ ಮಾತೇ ಇಲ್ಲ ಎಂದು ಸಚಿವ ಶಿವರಾಜ್ ತಂಗಡಿಗೆ ಹೇಳಿದ್ದಾರೆ. ಹೀಗೆ ಹೇಳಿಕೆ ಕೊಟ್ಟರೆ ಕರ್ನಾಟಕದ ಜನ ಸುಮ್ಮನಿರುವುದಿಲ್ಲ. ಮತ್ತೆ ಬೆಳಗಾವಿ ಸುದ್ದಿಗೆ ಬರಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಕನ್ನಡಿಗರೇ ಅತಿ ಹೆಚ್ಚು ಇರುವುದು. ಮಾಹಿತಿ ಕೊರತೆಯಿಂದ ಆದಿತ್ಯ ಠಾಕ್ರೆ ಆ ರೀತಿ ಹೇಳಿರಬಹುದು ಎಂದು ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಹೇಳಿಕೆಗೆ ಕೆಂಡ ಕಾರಿದ್ದು, ಗಡಿ ವಿವಾದ ಕುರಿತಂತೆ ಇದುವರೆಗೂ ಬಂದಿರುವ ವರದಿಗಳನ್ನು ಆದಿತ್ಯ ಗಮನಿಸಲಿ. ಬೆಳಗಾವಿ ಕನ್ನಡಿಗರ ಆಸ್ತಿ. ಇದನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಆದಿತ್ಯ ಠಾಕ್ರೆ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ. ಬೆಳಗಾವಿ ಕರ್ನಾಟಕದ ಅಂಗ. ಇಂದು ಎಂದಿಗೂ ಕರ್ನಾಟಕದ ಭಾಗವಾಗಿಯೇ ಇರುತ್ತದೆ. ಆದಿತ್ಯ ಠಾಕ್ರೆ ಯಾವ ಉದ್ದೇಶಕ್ಕೆ, ಯಾವ ಸಂದರ್ಭದಲ್ಲಿ ಆ ರೀತಿ ಹೇಳಿರಬಹುದು ತಿಳಿದಿಲ್ಲ. ಆದರೆ ಬೆಳಗಾವಿ ಎಂದೆಂದಿಗೂ ಕರ್ನಾಟಕದ ಭಾಗವೇ ಆಗಿರುತ್ತದೆ ಎಂದು ಹೇಳಿದ್ದಾರೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಆದಿತ್ಯ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದ್ದು, ಮೊದಲು ಮುಂಬೈ ನಗರವನ್ನು ಕೆಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಬೇಕು. ತನ್ನ ಪ್ರಚಾರಕ್ಕಾಗಿ ಆದಿತ್ಯ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಸುವರ್ಣ ಸೌಧ ಕಟ್ಟಿದ್ದೇವೆ. ಅಧಿವೇಶನ ನಡೆಸುತ್ತಿದ್ದೇವೆ. ಅವರು ಸೋತಿದ್ದಾರೆ ಹುಚ್ಚುಚ್ಚಾಗಿ ಪ್ರಚಾರಕ್ಕೆ, ತೀಟೆಗಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಆದಿತ್ಯ ಪ್ರಚಾರಕ್ಕೋಸ್ಕರ ಇಂತಹ ಹೇಳಿಕೆ ನೀಡಿದ್ದಾರೆ. ಹುಚ್ಚುತನದ ಹೇಳಿಕೆ ಅಷ್ಟೇ, ಮಹಾರಾಷ್ಟ್ರದಲ್ಲಿ ಸೋಲು ಕಂಡಿರುವ ಅವರು ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.