ಉಡುಪಿ: ವಾರದೊಳಗೆ ತಮ್ಮ ಜಮೀನಿನ ಪಹಣಿಯನ್ನು ರೈತರು ಆಧಾರ್ ಗೆ ಜೋಡಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಪಹಣಿ- ಆಧಾರ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಉಡುಪಿ ಜಿಲ್ಲೆಯ ಅನೇಕ ರೈತರು ಆಧಾರ್ ಜೋಡಣೆ ಮಾಡಲು ಹಿಂಜರಿಯುತ್ತಿರುವುದರಿಂದ ಇದುವರೆಗೆ ಶೇಕಡ 65 ರಷ್ಟು ಮಾತ್ರ ಪ್ರಗತಿಯಾಗಿದೆ. ಹಾಗಾಗಿ ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಜಮೀನಿನ ಮಾಲೀಕರು ಪಹಣಿಯನ್ನು ಆಧಾರ್ ಗೆ ಜೋಡಣೆ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.
ನಿಗದಿತ ಸಮಯದಲ್ಲಿ ರೈತರು ಸಾಲದ ಸೌಲಭ್ಯ ಪಡೆದುಕೊಳ್ಳಲು ಅಕ್ರಮ ಖಾತಾ ಬದಲಾವಣೆ ತಡೆಯುವ ನಿಟ್ಟಿನಲ್ಲಿ ಆಧಾರ್ ಜೋಡಣೆ ಅವಶ್ಯಕವಾಗಿದೆ. ಜಿಲ್ಲೆಯ ರೈತರು ಮೂರು ದಿನದೊಳಗೆ ಪಹಣಿ, ಆಧಾರ್ ದಾಖಲಾತಿಗಳೊಂದಿಗೆ ಆಧಾರ್ ಜೋಡಣೆಯಾದ ಮೊಬೈಲ್ ನೊಂದಿಗೆ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿ ಸಂಪರ್ಕಿಸಿ ಜೋಡಣೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಈ ಕಾರ್ಯವು ಸೈಬರ್ ಸೆಂಟರ್, ಗ್ರಾಮ ಒನ್ ಸೆಂಟರ್ ಮೊದಲಾದ ಕಡೆ ಮಾಡಲು ಅವಕಾಶ ಇರುವುದಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳ ಮೂಲಕವೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.