![](https://kannadadunia.com/wp-content/uploads/2023/08/krishna-byre-gowda.png)
ಬೆಳಗಾವಿ : ಹಣ ದುರ್ಬಳಕೆ ಹಾಗೂ ಅಕ್ರಮ ಪ್ರಕರಣಗಳನ್ನು ನಿಯಂತ್ರಿಸಲು “ಫ್ರೂಟ್ಸ್” ಮಾದರಿಯಲ್ಲೇ ಆಧಾರ್ ಕಾರ್ಡ್ ಮತ್ತು ಪಹಣಿ ಲಿಂಕ್ ಮಾಡುವ ಕೆಲಸ ಆರಂಭವಾಗಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ರೈತರಿಗೆ ಬರ ಪರಿಹಾರವನ್ನು ಶೀಘ್ರ ಮತ್ತು ಪಾರದರ್ಶಕವಾಗಿ ನೀಡಲು ಫ್ರೂಟ್ಸ್ ನವೀಕರಣಕ್ಕೆ ಸೂಚಿಸಲಾಗಿತ್ತು. ಶೇ.80 ರಷ್ಟು ಗುರಿ ನೀಡಲಾಗಿತ್ತು. ಬೆಳಗಾವಿ ಜಿಲ್ಲೆ ಈ ಗುರಿಯನ್ನು ಪೂರೈಸಿರುವುದು ಸಂತಸದ ವಿಚಾರ” ಎಂದರು.
ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಳೆದ ಎರಡು ತಿಂಗಳಿನಿಂದ ಆಂದೋಲನ ಮಾದರಿಯಲ್ಲಿ ಫ್ರೂಟ್ಸ್ ದತ್ತಾಂಶ ನವೀಕರಣಕ್ಕೆ ಕೆಲಸ ಮಾಡಿದ್ದೀರಿ. ಆದರೆ, ಆಧಾರ್ ಮತ್ತು ಪಹಣಿ ಲಿಂಕ್ ಗೂ ಎಲ್ಲಾ ಅಧಿಕಾರಿಗಳೂ ಇದೇ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಹಲವು ಜಿಲ್ಲೆಗಳಲ್ಲಿ ಯಾರದ್ದೋ ಭೂಮಿಗೆ ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿಗೆ ಪರಿಹಾರ ನೀಡಿರುವ, ಯಾವುದೋ ಜಿಲ್ಲೆಯ ರೈತರ ಪರಿಹಾರ ಹಣ ಮತ್ತ್ಯಾವುದೋ ಜಿಲ್ಲೆಯ ರೈತರಿಗೆ ನೀಡಿರುವ, ಹಣ ದುರುಪಯೋಗವಾಗಿರುವ ಹಲವು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಆಧಾರ್ ಮತ್ತು ಪಹಣಿ ಲಿಂಕ್ ಮಾಡುವ ಮೂಲಕ ಮಾತ್ರ ಇಂತಹ ಅಕ್ರಮಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯ ಎಂದು ಅವರು ಹೇಳಿದರು.