alex Certify ಐಪಿ ಸೆಟ್ ಆರ್.ಆರ್ ನಂಬರ್ ಗಳಿಗೆ ‘ಅಧಾರ್ ಜೋಡಣೆ’ ದಾಖಲೆಗಾಗಿ ಅಷ್ಟೇ : ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿ ಸೆಟ್ ಆರ್.ಆರ್ ನಂಬರ್ ಗಳಿಗೆ ‘ಅಧಾರ್ ಜೋಡಣೆ’ ದಾಖಲೆಗಾಗಿ ಅಷ್ಟೇ : ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ

ಬಳ್ಳಾರಿ : ರಾಜ್ಯದಲ್ಲಿ ಐಪಿ ಸೆಟ್ ಆರ್.ಆರ್ ನಂಬರ್ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುತ್ತಿರುವುದು ದಾಖಲಾತಿಗಾಗಿ ಮಾತ್ರವೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಐಪಿ ಸೆಟ್ಗಳ ಸಂಖ್ಯೆ ತಿಳಿದುಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಐಪಿ ಸೆಟ್ಗಳ ಆರ್.ಆರ್.ನಂಬರ್ ಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 10 ಎಚ್.ಪಿ.ವರೆಗಿನ ಕೃಷಿ ಪಂಪ್ ಸೆಟ್ಗಳಿಗೆ ಈಗಾಗಲೇ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಅವುಗಳಿಗೆ ಎಷ್ಟು ವಿದ್ಯುತ್ ಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಗೊಂದಲ ಉಂಟಾಗುತ್ತಿದೆ. ಅಕ್ರಮ ಪಂಪ್ ಸೆಟ್ಗಳಿಂದಾಗಿ ಸಕ್ರಮ ಪಂಪ್ಸೆಟ್ಗಳಿಗೂ ವಿದ್ಯುತ್ ಸಮಸ್ಯೆಯಾಗುತ್ತಿದೆ. ಐಪಿ ಸೆಟ್ಗಳ ಆರ್.ಆರ್ ನಂಬರ್ಗಳಿಗೆ ಆಧಾರ್ ಜೋಡಣೆ ಮಾಡಿದರೆ ಎಷ್ಟು ಪಂಪ್ ಸೆಟ್ಗಳಿವೆ ಮತ್ತು ಅವುಗಳಿಗೆ ಎಷ್ಟು ವಿದ್ಯುತ್ ಬೇಕು ಎಂಬ ಸ್ಪಷ್ಟತೆ ಸಿಗುತ್ತದೆ. ಅದಕ್ಕೆ ತಕ್ಕಂತೆ ಸಮರ್ಪಕ ವಿದ್ಯುತ್ ಪೂರೈಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

“ಬರಗಾಲದ ಸಂದರ್ಭದಲ್ಲೂ ರಾಜ್ಯದ ರೈತರಿಗೆ ದಿನದ ಏಳು ಗಂಟೆ ವಿದ್ಯುತ್ ಪೂರೈಸಲಾಗಿದೆ. ಲೋಡ್ ಶೆಡ್ಡಿಂಗ್ ಮಾಡಿಲ್ಲ. ಭವಿಷ್ಯದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಲಭ್ಯವಿರುತ್ತದೆ. ಆದರೂ ಬೇರೆ ಬೇರೆ ಕಾರಣಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಈ ಸಮಸ್ಯೆ ಬಗೆಹರಿಸಿ ಸಮರ್ಪಕ ವಿದ್ಯುತ್ ಪೂರೈಕೆ ಉದ್ದೇಶದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೇನೆ” ಎಂದು ಹೇಳಿದರು.

ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಬರುವ ಅಕ್ರಮ ಐಪಿ ಸೆಟ್ಗಳನ್ನು ಸಕ್ರಮಗೊಳಿಸಲಾಗುವುದು. ಅದಕ್ಕಿಂತ ಹೆಚ್ಚು ಅಂತರವಿರುವ ಕಡೆಗಳಲ್ಲಿ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್ಗಳನ್ನು ಒದಗಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದಿಂದ ಶೇ.30 ಮತ್ತು ರಾಜ್ಯ ಸರ್ಕಾರದಿಂದ ಶೇ.50 ಸಬ್ಸಿಡಿ ನೀಡಲಾಗುತ್ತದೆ. ರೈತರು ಶೇ.20 ರಷ್ಟು ಮೊತ್ತ ಭರಿಸಿ ಪಂಪ್ ಸೆಟ್ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...