ಬೆಂಗಳೂರು: ಜುಲೈ 19ರಂದು ಸಂಜೆ ವಿಧಾನಸೌಧದ ಬ್ಯಾಂಕ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಪ್ರತಿ ಮನೆಯೊಡತಿ ಖಾತೆಗೆ 2,000 ರೂ. ನೀಡಲಿದ್ದು, ನೋಂದಣಿಗೆ ಗಡುವು ಇರುವುದಿಲ್ಲ. ಗೃಹಲಕ್ಷ್ಮಿ ಯೋಜನೆಗೆ ಜನರು ಆನ್ಲೈನ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ. ಸೇವಾ ಕೇಂದ್ರಗಳಿಗೆ ತೆರಳಿ ಅಥವಾ ಮನೆಗೆ ಬರುವ ಪ್ರಜಾಪ್ರತಿನಿಧಿಗಳ ಮೂಲಕ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕಿದೆ.
ಬೇಕಿರುವ ದಾಖಲೆಗಳು
ಪಡಿತರ ಚೀಟಿ ಸಂಖ್ಯೆ
ಪತಿ-ಪತ್ನಿ ಇಬ್ಬರ ಆಧಾರ್ ಕಾರ್ಡ್ ಜೆರಾಕ್ಸ್
ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಬೇಕಿದ್ದರೆ ಆ ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್
ಆಧಾರ್ ಕಾರ್ಡ್ ಜೋಡಣೆ ಆಗಿರುವ ಮೊಬೈಲ್
ನೋಂದಣಿಗೆ ಸಂದೇಶ
ರೇಷನ್ ಕಾರ್ಡ್ ನಲ್ಲಿ ಮನೆಯೊಡತಿ ನೀಡಿರುವ ಮೊಬೈಲ್ ಸಂಖ್ಯೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಬೇಕಾದ ದಿನಾಂಕ, ಸಮಯ, ಸ್ಥಳದ ಸಂದೇಶ ಬರುತ್ತದೆ.
ನಿಗದಿತ ದಿನದಂದು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಿಸಬೇಕು.
ಸಂದೇಶ ಬರದಿದ್ದರೆ 1902ಕ್ಕೆ ಕರೆ ಮಾಡಿ ಅಥವಾ 8147500500 ಗೆ ವಾಟ್ಸಾಪ್ ಮಾಡಿ ನೋಂದಣಿ ವಿವರ ಪಡೆದುಕೊಳ್ಳಬಹುದು.
ನಿಗದಿತ ಸಮಯಕ್ಕೆ ಹೋಗಲು ಆಗದಿದ್ದರೆ, ಅದೇ ಸೇವಾ ಕೇಂದ್ರಕ್ಕೆ ಸಂಜೆ 5 ರಿಂದ 7 ಗಂಟೆ ಒಳಗೆ ಹೋದರೆ ನೋಂದಣಿ ಮಾಡಲಾಗುವುದು.
ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ನೇಮಿಸಲ್ಪಟ್ಟ ಪ್ರಜಾಪ್ರತಿನಿಧಿಗಳು ಮನೆಗೆ ಬಂದು ನೋಂದಣಿ ಮಾಡಿಸಲಿದ್ದಾರೆ.
ಆಧಾರ್ ಜೋಡಣೆಯಾಗದ ಬ್ಯಾಂಕ್ ಖಾತೆಗೂ ಹಣ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಮಹಿಳೆಯರು ಆಧಾರ್ ಲಿಂಕ್ ಆಗದ ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ ಪ್ರತಿ ನೀಡಬೇಕಿದೆ.
ಇದರೊಂದಿಗೆ ಆಧಾರ್ ಕಾರ್ಡ್ ಜೋಡಣೆಯಾದ ಮೊಬೈಲ್ ತೆಗೆದುಕೊಂಡು ಬರಬೇಕು.
ನೋಂದಣಿ ಮಾಡಿದ ನಂತರ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಲಾಗುವುದು.