
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಹಾಸ್ಟೆಲ್ ಗಳಲ್ಲಿ ಬೋಗಸ್ ದಾಖಲಾತಿ, ಹಾಜರಾತಿ ಸೃಷ್ಟಿಸಿ ಅನುದಾನ, ಸಂಪನ್ಮೂಲ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಆಧಾರ್ ಆಧರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಮಕ್ಕಳ ದಾಖಲಾತಿ ಆಧಾರದ ಮೇಲೆ ಪ್ರಿ ಮೆಟ್ರಿಕ್ ಹಾಸ್ಟೆಲ್ ಗಳಿಗೆ ಸರ್ಕಾರದಿಂದ ನೀಡುವ ಅನುದಾನ ಮತ್ತು ಸೌಕರ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನು ನಿಯಂತ್ರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಇಲಾಖೆಯಿಂದ ಸ್ಕಾಲರ್ ಶಿಪ್ ವಿತರಿಸಲು ಈಗಾಗಲೇ ವಿದ್ಯಾರ್ಥಿಗಳ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಮಾಡಲಾಗುತ್ತಿದ್ದು, ಅದೇ ರೀತಿ ಹಾಸ್ಟೆಲ್ ಗಳಿಗೆ ದಾಖಲಾತಿ ಮಾಡಿಕೊಳ್ಳುವಾಗ ಮತ್ತು ಹಾಜರಾತಿ ಪಡೆಯಲು ಈ ವ್ಯವಸ್ಥೆ ಅಳವಡಿಸಿಕೊಳ್ಳುವ ಪ್ರಸ್ತಾಪ ಸರ್ಕಾರದ ಮುಂದಿದೆ.
ಹೊರ ರಾಜ್ಯಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ದಾಖಲಾತಿ ಮತ್ತು ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿಯೂ ಅದನ್ನು ಅನುಷ್ಠಾನಗೊಳಿಸಿದರೆ ಸರ್ಕಾರಕ್ಕೆ ಪ್ರತಿ ವರ್ಷ ಕೋಟ್ಯಂತರ ರೂ. ಉಳಿತಾಯವಾಗಲಿದೆ.
ಸರ್ಕಾರದಿಂದ ಪ್ರೀ ಮೆಟ್ರಿಕ್ ಹಾಸ್ಟೆಲ್ ಪ್ರತಿ ವಿದ್ಯಾರ್ಥಿಗೆ ಶೈಕ್ಷಣಿಕ ವರ್ಷವೊಂದಕ್ಕೆ ಸುಮಾರು 20 ಸಾವಿರ ರೂ. ಖರ್ಚು ಮಾಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎನ್ನಲಾಗಿದೆ.