ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಆಸ್ತಿ ಕಬಳಿಕೆ ಮಾಡುವುದನ್ನು ತಡೆಯಲು ಆಸ್ತಿ ನೋಂದಣಿಗೆ ಆಧಾರ್ ದೃಢೀಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ನನ್ನ ಆಸ್ತಿ ಎಂಬ ಯೋಜನೆಯನ್ನು ನನ್ನ ಭೂಮಿ ನನ್ನ ಗುರುತು ಎಂಬ ಶೀರ್ಷಿಕೆಯಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ವೇಳೆ ಆಧಾರ್ ಪಡೆಯುವ ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಪ್ರಕಾರ ಆಧಾರ್ ಕಡ್ಡಾಯ ಮಾಡಲು ಆಗುವುದಿಲ್ಲ. ಆದರೆ, ನೋಂದಣಿ ಮಾಡಬೇಕಿದ್ದು, ಆಸ್ತಿ ನೋಂದಣಿ ಸಮಯದಲ್ಲಿ ಆಧಾರ್ ನಂಬರ್ ಕೇಳುತ್ತೇವೆ. ಇದರಿಂದ ನಕಲು ತಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ರಜಾ ದಿನ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಭಾನುವಾರ ಒಂದೊಂದು ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲಾಗುವುದು. ಸದ್ಯ ಕಾರ್ಪೊರೇಷನ್ ಇರುವ ಜಿಲ್ಲೆಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಇದ್ದು, ಏಪ್ರಿಲ್ ನಂತರ ಮಹಾನಗರಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೆ ತರಲಾಗುವುದು. ಭಾನುವಾರ ಕೆಲಸ ಮಾಡಿದವರಿಗೆ ಮಂಗಳವಾರ ರಜೆ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.