ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆಗೆ ನೀಡಿದ್ದ ಗಡುವು ಮೀರಿ ವಿಳಂಬದ ಕಾರಣಕ್ಕೆ ದಂಡದೊಂದಿಗೆ ಆಧಾರ್ -ಪಾನ್ ಲಿಂಕ್ ಮಾಡಿದ ಬಡವರಿಗೆ ಸಂಕಷ್ಟ ಎದುರಾಗಿದೆ.
ನಿಗದಿತ ಅವಧಿ ಮೀರಿದ ನಂತರ ಒಂದು ಸಾವಿರ ರೂಪಾಯಿ ದಂಡದ ಮೊತ್ತ ಆದಾಯ ತೆರಿಗೆ ಇಲಾಖೆಗೆ ಪಾವತಿಸಿ ಪಾನ್ -ಆಧಾರ್ ಕಾರ್ಡ್ ಜೋಡಣೆ ಮಾಡಿದವರನ್ನು ಆದಾಯ ತೆರಿಗೆ ಪಾವತಿದಾರರು ಎನ್ನುವ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.
ಆಹಾರ ಇಲಾಖೆ ರಾಜ್ಯದಲ್ಲಿ 1,06,152 ಆದಾಯ ತೆರಿಗೆ ಪಾವತಿದಾರರು ಹೊಂದಿದ ಅನರ್ಹ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ರದ್ದು ಪಡಿಸಲು ಮುಂದಾಗಿದೆ. ಆದರೆ, ಇದರಲ್ಲಿ ಅರ್ಧಕ್ಕೂ ಅಧಿಕ ಮಂದಿ ಬಡವರು ಇದ್ದಾರೆ ಎನ್ನಲಾಗಿದೆ.
ಬಿಪಿಎಲ್ ಕಾರ್ಡ್ ನಿಂದ ವಂಚಿತರಾದ ಬಡವರಿಗೆ ಆದಾಯ ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ(NOC) ತರುವಂತೆ ಆಹಾರ ಇಲಾಖೆ ಅಧಿಕಾರಿಗಳು ಸೂಚಿಸುತ್ತಿದ್ದು, ಹೀಗಾಗಿ ಬಡವರು ಐಟಿ ಕಚೇರಿಗೆ ಅರ್ಜಿ ಸಲ್ಲಿಸಿ ಎನ್ಒಸಿ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಗಳು ರದ್ದಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪಡಿತರ ಕೂಡ ಸಿಗುತ್ತಿಲ್ಲ. ಗೃಹಲಕ್ಷ್ಮಿ ಹಣ ನಿಂತುಹೋಗಿದೆ. ಅನ್ನಭಾಗ್ಯದ ಅಕ್ಕಿ, ಹೆಚ್ಚುವರಿ ಅಕ್ಕಿ ಹಣ ಕೂಡ ಸಿಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ.
ಹೀಗೆ 1 ಸಾವಿರ ರೂ. ದಂಡ ಪಾವತಿಸಿ ಆಧಾರ್ –ಪಾನ್ ಕಾರ್ಡ್ ಜೋಡಣೆ ಮಾಡಿದ ಬಡವರು ಗ್ಯಾರಂಟಿ ಸೇರಿ ಹಲವು ಸೌಲಭ್ಯಗಳನ್ನು ಕಳೆದುಕೊಳ್ಳುವಂತಾಗಿದೆ ಎಂದು ಹೇಳಲಾಗಿದೆ.