ಬೆಂಗಳೂರು: ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಬಾಡಿಗೆದಾರರು ಮತ್ತು ಇತರೆ ಗ್ರಾಹಕರು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಜೋಡಣೆ ಮಾಡಬೇಕಿದೆ.
ಇಂಧನ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಡಿ.ಎಂ. ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಉಚಿತ ವಿದ್ಯುತ್ ಸೌಲಭ್ಯ ಕುರಿತು ಉಂಟಾದ ಗೊಂದಲವುಗಳ ಬಗ್ಗೆ ಸ್ಪಷ್ಟನೆ ನೀಡಿರುವ ಇಂಧನ ಇಲಾಖೆ, ಗೃಹ ವಿದ್ಯುತ್ ಬಳಕೆದಾರರು ಬಾಡಿಗೆ ಮನೆಗಳಲ್ಲಿ ವಾಸುತ್ತಿದ್ದಲ್ಲಿ ಮನೆಯ ವಿಳಾಸಕ್ಕೆ ಸಂಬಂಧಿಸಿದ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಜೋಡಣೆ ಮಾಡಿ ಸೌಲಭ್ಯ ಪಡೆಯಬಹುದು. ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಜೂನ್ 18ರಿಂದ ನೋಂದಣಿ ಆರಂಭವಾಗಲಿದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ನಾಳೆಯಿಂದ ಗೃಹಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
http://sevasindhugss.karnataka.gov.in ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ನಲ್ಲಿಯೂ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 1912 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು.
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡಕಚೇರಿ, ಗ್ರಾಪಂ ಕಚೇರಿ, ವಿದ್ಯುತ್ ಕಚೇರಿಗಳಲ್ಲಿ ನೋಂದಾಯಿಸಬಹುದು.
ಆಧಾರ್ ಕಾರ್ಡ್ ನಂಬರ್, ಆರ್.ಆರ್. ನಂಬರ್, ಮೊಬೈಲ್ ಸಂಖ್ಯೆ, ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.