ಬೆಂಗಳೂರು: ಶಾಲಾ ಮಕ್ಕಳಿಗೆ ಆಧಾರ್ ನೋಂದಣಿ ಕಡ್ಡಾಯಗೊಳಿಸಿದ್ದು, ವಿದ್ಯಾರ್ಥಿಗಳ ಆಧಾರ್ ಜೋಡಣೆ ಶೇಕಡ 60ರಷ್ಟು ಪೂರ್ಣಗೊಂಡಿದೆ.
ವಿದ್ಯಾರ್ಥಿಗಳಿಗೆ ಸಿಗುವ ಬಹುತೇಕ ಸೌಲಭ್ಯಗಳಿಗೆ ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಸಾಕ್ಸ್, ಶೂ, ಕ್ಷೀರಭಾಗ್ಯ, ಬಡ ಮಕ್ಕಳ ಖಾತೆಗೆ ಹಣ ಸೇರಿದಂತೆ ಹೆಚ್ಚಿನ ಸೌಲಭ್ಯಗಳು ಪೋಲಾಗದಂತೆ ತಡೆಯಲು ಆಧಾರ್ ಜೋಡಣೆ ನೆರವಾಗುತ್ತದೆ.
ಮಕ್ಕಳ ದಾಖಲಾತಿಯ ಮಾಹಿತಿಯೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿದ ಪರಿಣಾಮ 25000 ವಿದ್ಯಾರ್ಥಿಗಳು ಎರಡು ಕಡೆ(ಡೂಪ್ಲಿಕೇಷನ್) ಪ್ರವೇಶವಾಗಿರುವುದು ಪತ್ತೆಯಾಗಿದೆ. ಈ ರೀತಿ ಡೂಪ್ಲಿಕೇಷನ್ ಪ್ರವೇಶವನ್ನು ಸ್ಟೂಡೆಂಟ್ ಅಚೀವ್ ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ನಿಂದ ತೆಗೆದುಹಾಕಲು ಕ್ರಮಕೈಗೊಳ್ಳಲಾಗಿದೆ.
ಒಂದು ಶಾಲೆಯಲ್ಲಿ ಓದಿದ ನಂತರ ಅನಿವಾರ್ಯವಾಗಿ ಬೇರೆ ಶಾಲೆಗೆ ಪ್ರವೇಶ ಪಡೆದರೆ ಎರಡು ಕಡೆ ಮಾಹಿತಿ ದಾಖಲಾಗುವುದರಿಂದ ಡೂಪ್ಲಿಕೇಷನ್ ಆಗುತ್ತದೆ. ವಿದ್ಯಾರ್ಥಿಗಳ ಡೂಪ್ಲಿಕೇಷನ್ ಪ್ರವೇಶ ರದ್ದು ಮಾಡುವ ಹಾಗೂ ಸರ್ಕಾರಿ ಅನುದಾನಿತ ಮಕ್ಕಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಆಧಾರ್ ಜೊತೆಗೆ ಜೋಡಣೆ ಮಾಡುವ ಕಾರ್ಯ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳ ಆಧಾರ್ ಕಾರ್ಡ್ ನೀಡುವಾಗ ಪೋಷಕರು ಸ್ವಯಂ ಪ್ರೇರಿತ ಒಪ್ಪಿಗೆ ಮೇರೆಗೆ ಆಧಾರ್ ಮೌಲ್ಯೀಕರಿಸಲು ಅಭ್ಯಂತರವಿಲ್ಲವೆಂದು ಒಪ್ಪಿಗೆ ಪತ್ರ ಪಡೆದ ನಂತರ ಜೋಡಣೆ ಮಾಡಲಾಗುತ್ತಿದೆ.