ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊಸ ವರ್ಷದಿಂದ ಎಲ್ಲಾ ವೇತನಗಳನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮೂಲಕವೇ ಪಾವತಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಇದಕ್ಕಾಗಿ ಕಾರ್ಮಿಕರ ಆಧಾರ್ ವಿವರಗಳನ್ನು ಜಾಬ್ ಕಾರ್ಡ್ ಗಳೊಂದಿಗೆ ಜೋಡಣೆ ಮಾಡಬೇಕಿದೆ. ಎಲ್ಲಾ ವೇತನಗಳನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ ಕಡ್ಡಾಯಗೊಳಿಸಲು ನಿಗದಿಪಡಿಸಿದ್ದ ಐದನೇ ಗಡುವು ಡಿಸೆಂಬರ್ 31 ರಂದು ಮುಕ್ತಾಯವಾಗಿದೆ. ಹೊಸ ವರ್ಷದಿಂದ ಎಲ್ಲಾ ವೇತನ ಪಾವತಿ ಆಧಾರ್ ಆಧಾರಿತವಾಗಲಿವೆ.
ಇದನ್ನು ಕಾಂಗ್ರೆಸ್ ವಿರೋಧಿಸಿದೆ. ದುರ್ಬಲ ವರ್ಗದ ಬಡವರಿಗೆ ಪ್ರಧಾನಿಯಿಂದ ಹೊಸ ವರ್ಷಕ್ಕೆ ಕ್ರೂರ ಉಡುಗೊರೆ ಸಿಕ್ಕಿದೆ ಎಂದು ಆರೋಪಿಸಿದೆ. ಸಾಮಾಜಿಕ ಕಲ್ಯಾಣ ಪ್ರಯೋಜನಗಳನ್ನು ನಿರಾಕರಿಸಲು ಈ ರೀತಿ ಮಾಡಲಾಗಿದೆ. ತಂತ್ರಜ್ಞಾನ ಆಯುಧ ಬಳಸಿಕೊಂಡು ಬಡವರನ್ನು ಸೌಲಭ್ಯದಿಂದ ಹೊರಗಿಡುವ ಹುನ್ನಾರವೆಂದು ಕಾಂಗ್ರೆಸ್ ಆರೋಪ ಮಾಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಗೆ(ಎಂಜಿಎನ್‌ಆರ್‌ಇಜಿಎ) ಆಧಾರ್ ಮೂಲಕ ಪಾವತಿಗಳನ್ನು ಕಡ್ಡಾಯಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂಒಆರ್‌ಡಿ) ನಿಗದಿಪಡಿಸಿದ ಗಡುವು ಡಿಸೆಂಬರ್ 31, 2023 ರಂದು ಕೊನೆಗೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂವಹನದ ಉಸ್ತುವಾರಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟು 25.69 ಕೋಟಿ MGNREGA ಕಾರ್ಮಿಕರಿದ್ದು, ಅವರಲ್ಲಿ 14.33 ಕೋಟಿ ಸಕ್ರಿಯ ಕಾರ್ಮಿಕರು ಎಂದು ಪರಿಗಣಿಸಲಾಗಿದೆ. ಡಿಸೆಂಬರ್ 27 ರಂತೆ, ಒಟ್ಟು ನೋಂದಾಯಿತ ಕಾರ್ಮಿಕರಲ್ಲಿ ಶೇಕಡ 34.8(8.9 ಕೋಟಿ) ಮತ್ತು 12.7 ರಷ್ಟು ಸಕ್ರಿಯ ಕಾರ್ಮಿಕರ(1.8 ಕೋಟಿ) ಇನ್ನೂ ಅನರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರವು ತನ್ನ “ತಂತ್ರಜ್ಞಾನದೊಂದಿಗೆ ವಿನಾಶಕಾರಿ ಪ್ರಯೋಗಗಳನ್ನು” ಮುಂದುವರೆಸಿದೆ ಎಂದು ಟೀಕಿಸಿದ್ದಾರೆ.