alex Certify ನಿದ್ದೆಯಿಲ್ಲದೆ 264 ಗಂಟೆ ಕಳೆದ ಯುವಕ; ದಾಖಲೆಗಾಗಿ ಮಾಡಿದ ಈ ಹುಚ್ಚಾಟದ ಪರಿಣಾಮವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ದೆಯಿಲ್ಲದೆ 264 ಗಂಟೆ ಕಳೆದ ಯುವಕ; ದಾಖಲೆಗಾಗಿ ಮಾಡಿದ ಈ ಹುಚ್ಚಾಟದ ಪರಿಣಾಮವೇನು ಗೊತ್ತಾ….?

ನಾವು ಆರೋಗ್ಯವಾಗಿರಬೇಕೆಂದರೆ ಪ್ರತಿದಿನ ಕನಿಷ್ಠ 8 ಗಂಟೆ ನಿದ್ದೆ ಮಾಡಬೇಕು. ರಾತ್ರಿ ನಿದ್ರೆ ಸರಿಯಾಗಿ ಬಾರದಿದ್ದರೆ ಅಥವಾ ನಿದ್ದೆಯ  ಕೊರತೆಯಾದರೆ ಆಯಾಸ ಮತ್ತು ಚಡಪಡಿಕೆ ಉಂಟಾಗುತ್ತದೆ. ಆದ್ರೀಗ ಸಾಮಾಜಿಕ ಜಾಲತಾಣಗಳಲ್ಲಿ ‘ನೋ-ಸ್ಲೀಪ್ ಚಾಲೆಂಜ್’ ಟ್ರೆಂಡ್‌ ಶುರುವಾಗಿದೆ. ಅನೇಕರು ಹಗಲು-ರಾತ್ರಿ ನಿದ್ರಿಸದೇ ದಾಖಲೆ ಸೃಷ್ಟಿಸಲು ಪೈಪೋಟಿ ನಡೆಸುತ್ತಿದ್ದಾರೆ.

ನಾರ್ಮ್ ಎಂಬ 19 ವರ್ಷದ ಯೂಟ್ಯೂಬರ್ ಒಬ್ಬ ಬಹಳ ಸಮಯ ನಿದ್ದೆ ಮಾಡದೇ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನವನ್ನು ನೇರ ಪ್ರಸಾರ ಮಾಡಿದ್ದ. ಈತ 250 ಗಂಟೆಗಳ ಕಾಲ ನಿದ್ರಿಸದೇ ಎಚ್ಚರವಾಗಿದ್ದ. ನಾರ್ಮ್‌ ಆರೋಗ್ಯದ ಬಗ್ಗೆ ವೀಕ್ಷಕರು ಕಳವಳ ಕೂಡ ವ್ಯಕ್ತಪಡಿಸಿದ್ದರು. ಒಟ್ಟಾರೆ ಈತ 264 ಗಂಟೆ 24 ನಿಮಿಷಗಳ ಅವಧಿಯನ್ನು ‘ನಿದ್ದೆ ಮಾಡದೆ’ ಕಳೆದಿದ್ದಾನೆ. ಇದಾದ ನಂತರ ಯೂಟ್ಯೂಬ್ ಮತ್ತು ಕಿಕ್ ನಂತಹ ಸಾಮಾಜಿಕ ಮಾಧ್ಯಮಗಳು ಈತನಿಗೆ ನಿಷೇಧ ಹೇರಿವೆ.

ನಾರ್ಮ್ ತಾನು ದೀರ್ಘಕಾಲದವರೆಗೆ ಎಚ್ಚರವಾಗಿರುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ ಅದು ನಿಜವಲ್ಲ. 1986ರಲ್ಲಿ 453 ಗಂಟೆ ಅಂದರೆ ಸುಮಾರು 19 ದಿನ ನಿದ್ದೆ ಮಾಡದೇ ಕಳೆದ ರಾಬರ್ಟ್ ಮ್ಯಾಕ್ ಡೊನಾಲ್ಡ್ ಹೆಸರಿನಲ್ಲಿ ಈ ವಿಶ್ವ ದಾಖಲೆ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. 1997 ರಲ್ಲಿ ಭದ್ರತಾ ಕಾರಣಗಳಿಂದಾಗಿ ಈ ಕುರಿತ ಗಿನ್ನೆಸ್ ವಿಶ್ವ ದಾಖಲೆಗಳ ಮೇಲ್ವಿಚಾರಣೆಯನ್ನು ನಿಲ್ಲಿಸಲಾಯ್ತು.

ನಿದ್ರೆಯಿಲ್ಲದೆ ದೀರ್ಘಕಾಲ ಉಳಿಯುವುದು ತುಂಬಾ ಅಪಾಯಕಾರಿ. ವಯಸ್ಕರು ಪ್ರತಿ ರಾತ್ರಿ ಕನಿಷ್ಠ ಏಳು ಗಂಟೆ ನಿದ್ರೆ ಮಾಡಬೇಕು. ನಿದ್ದೆಯ ಕೊರತೆಯಿಂದ ಖಿನ್ನತೆ, ಮಧುಮೇಹ, ಬೊಜ್ಜು, ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಮುಂತಾದ ಮಾರಣಾಂತಿಕ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.

ನಿದ್ರೆಯು ನಮ್ಮ ದೇಹದ ಅನೇಕ ವ್ಯವಸ್ಥೆಗಳನ್ನು ಸರಿಪಡಿಸುತ್ತದೆ, ದೇಹಕ್ಕೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿದ್ರೆಯ ಮೊದಲ ಮೂರು ಹಂತಗಳಲ್ಲಿ ಪ್ಯಾರಾಸಿಂಪಥೆಟಿಕ್ ನರಮಂಡಲವು ಸಕ್ರಿಯವಾಗಿರುತ್ತದೆ, ಇದು ಜೀರ್ಣಕ್ರಿಯೆ ಮತ್ತು ವಿಶ್ರಾಂತಿಗೆ ಪರಿವರ್ತನೆಯನ್ನು ನಿಯಂತ್ರಿಸುತ್ತದೆ. ಹೃದಯ ಬಡಿತವನ್ನು ವೇಗಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೊನೆಯ ಹಂತದಲ್ಲಿ ಅಂದರೆ ರಾಪಿಡ್ ಐ ಮೂವ್ ಮೆಂಟ್ (ಆರ್ ಇಎಂ) ಹಂತದಲ್ಲಿ ಹೃದಯದ ಚಟುವಟಿಕೆ ಹೆಚ್ಚುತ್ತದೆ ಮತ್ತು ಕಣ್ಣುಗಳು ಚಲಿಸುತ್ತವೆ. ಈ ಹಂತವು ಸೃಜನಶೀಲತೆ, ಕಲಿಕೆಯ ಸಾಮರ್ಥ್ಯ ಮತ್ತು ನೆನಪುಗಳನ್ನು ಸಂಗ್ರಹಿಸುವಂತಹ ಅರಿವಿನ ಕಾರ್ಯಗಳಿಗೆ ಮುಖ್ಯವಾಗಿದೆ.

ಹಾಗಾಗಿ ಮಲಗುವ ಮುನ್ನ ಆಲ್ಕೋಹಾಲ್ ಅಥವಾ ಕೆಫೀನ್ ಭರಿತ ಆಹಾರವನ್ನು ಸೇವಿಸಬಾರದು. ಇವು ನಿದ್ರೆಯ ಚಕ್ರವನ್ನು ಹಾಳುಮಾಡುತ್ತವೆ. ನಿದ್ರೆಯ ಕೊರತೆಯ ಸಮಸ್ಯೆಯು ತೀವ್ರ ಅಥವಾ ದೀರ್ಘಾವಧಿಯದ್ದಾಗಿರಬಹುದು. 24 ಗಂಟೆಗಳ ಕಾಲ ನಿದ್ದೆಮಾಡದೇ ಇರುವುದರಿಂದ ಏಕಾಗ್ರತೆಯ ನಷ್ಟದ ಜೊತೆಗೆ ಇತರ ಅನೇಕ ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಣ್ಣುಗಳಲ್ಲಿ ಊತ, ಕಪ್ಪು ವರ್ತುಲಗಳು, ಕಿರಿಕಿರಿ, ಜ್ಞಾಪಕ ಶಕ್ತಿ ನಷ್ಟ, ಗೊಂದಲ, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಮಾಹಿತಿಯನ್ನು ವಿಶ್ಲೇಷಿಸಲು ಅಸಮರ್ಥತೆ, ಆಹಾರಕ್ಕಾಗಿ ಹೆಚ್ಚಿದ ಕಡುಬಯಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಸತತ ಎರಡು ದಿನ ನಿದ್ದೆಯಿಲ್ಲದೆ ಎಚ್ಚರವಾಗಿಯೇ ಇದ್ದರೆ ಏನಾಗುತ್ತದೆ?

ಎರಡನೇ ದಿನ ನಿದ್ರೆಯಿಲ್ಲದೆ ಕಳೆದರೆ ಮೇಲಿನ ರೋಗಲಕ್ಷಣಗಳು ಹೆಚ್ಚು ತೀವ್ರವಾಗಬಹುದು ಮತ್ತು ವ್ಯಕ್ತಿಯ ನಡವಳಿಕೆಯಲ್ಲೂ ಬದಲಾವಣೆಗಳು ಕಂಡುಬರಬಹುದು. ನಿದ್ರೆಗಾಗಿ ದೇಹದ ಬಯಕೆಯು ಬಲಗೊಳ್ಳುತ್ತದೆ. ಇದರಿಂದಾಗಿ ವ್ಯಕ್ತಿಯು ‘ಮೈಕ್ರೋಸ್ಲೀಪ್’ ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ, ಅಂದರೆ ಅನಗತ್ಯ ನಿದ್ರೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾನೆ, ಇದು ಸುಮಾರು 30 ಸೆಕೆಂಡುಗಳವರೆಗೆ ಇರುತ್ತದೆ. ನಿದ್ರೆಯ ಕೊರತೆಯು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ.

ಸತತ ಮೂರು ದಿನಗಳ ಕಾಲ ನಿದ್ದೆ ಮಾಡದೇ ಇದ್ದಾಗ ಅದರ ಅಗತ್ಯವು ತೀವ್ರವಾಗುತ್ತದೆ. ವ್ಯಕ್ತಿಯು ದೀರ್ಘಾವಧಿಯ ‘ಮೈಕ್ರೋಸ್ಲೀಪ್’ ತೆಗೆದುಕೊಳ್ಳಬಹುದು. ಇದರಿಂದಾಗಿ ನೈಜ ಪ್ರಪಂಚದಿಂದ ಸಂಪರ್ಕ ಕಡಿತಗೊಳ್ಳುತ್ತದೆ. ನಿದ್ರೆಯಿಲ್ಲದೆ ನಾಲ್ಕು ದಿನಗಳನ್ನು ಕಳೆದರೆ ರೋಗಲಕ್ಷಣಗಳು ಉತ್ತುಂಗವನ್ನು ತಲುಪುತ್ತವೆ. ನಿದ್ರಾಹೀನತೆಯು ಸೈಕೋಸಿಸ್ ರೂಪವನ್ನು ಪಡೆದುಕೊಳ್ಳುತ್ತವೆ. ವ್ಯಕ್ತಿ ವಾಸ್ತವದಿಂದ ದೂರವಾಗಿ ಮಲಗಲು ಬಯಸುತ್ತಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...