ತುಮಕೂರು: ಇತ್ತೀಚಿನ ದಿನಗಳಲ್ಲಿ ಯುವಕರು ಕೆಲಸಕ್ಕಿಂತ ಹೆಚ್ಚಾಗಿ ಸಿನಿಮಾ, ಆನ್ ಲೈನ್ ಗೇಮ್ ಗಳ ಗೀಳಿಗೆ ಬಿದ್ದಿದ್ದು, ಅತಿಯಾದ ಸಿನಿಮಾ ಹುಚ್ಚು ಯುವಕನೊಬ್ಬನನ್ನು ಬಲಿಪಡೆದ ಘಟನೆ ಬೆಳಕಿಗೆ ಬಂದಿದೆ.
ತೆಲುಗಿನ ಅರುಂಧತಿ ಸಿನಿಮಾ ನೋಡುತ್ತಿದ್ದ ಯುವಕನೊಬ್ಬ, ಆ ಸಿನಿಮಾದಲ್ಲಿದ್ದಂತೆ ಬೆಂಕಿಗಾಹುತಿಯಾಗಲು ಹೋಗಿ ಸಾವನ್ನಪ್ಪಿದ್ದಾನೆ. ತುಮಕೂರು ಮೂಲದ 22 ವರ್ಷದ ರೇಣುಕಾ ಪ್ರಸಾದ್ ಎಂಬ ಯುವಕ ಸಿನಿಮಾಗೆ ಅಡಿಕ್ಟ್ ಆಗಿದ್ದ.
ಮೊಬೈಲ್ ನಲ್ಲಿ ಅರುಂಧತಿ ಸಿನಿಮಾ ನೋಡುತ್ತಿದ್ದ ಯುವಕ ಆ ಚಿತ್ರದಲ್ಲಿ ನಟಿ ದುಷ್ಟ ಶಕ್ತಿಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಸಾವನ್ನಪ್ಪುತ್ತಾಳೆ. ತೆಂಗಿನಕಾಯಿಯಿಂದ ತಲೆಗೆ ಹೊಡೆದು, ಬೆಂಕಿ ಹಚ್ಚಲಾಗುತ್ತದೆ ಈ ದೃಶ್ಯ ನೋಡಿದ ಯುವಕ ತಾನೂ ಆತ್ಮಾಹುತಿ ಮಾಡಿಕೊಳ್ಳಲು ಮುಂದಾಗಿದ್ದು, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತನಗೆ ಮುಕ್ತಿ ಕೊಡಿ ಮುಕ್ತಿ ಕೊಡಿ ಎಂದು ಕಿರುಚಿದ್ದಾನೆ. ಆತನ ಕೂಗಾಟ ಕೇಳಿ ಅಕ್ಕಪಕ್ಕದವರು ಬಂದು ನೋಡಿದಾಗ ಯುವಕ ಬೆಂಕಿ ಹಚ್ಚಿಕೊಂಡಿದ್ದು ಗೊತ್ತಾಗಿದೆ. ಬೆಂಕಿ ಆರಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡು ಬಳಲುತ್ತಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.