ತನಗೊಂದು ಸೂಕ್ತ ಜೋಡಿಯ ಹುಡುಕಾಟದಲ್ಲಿದ್ದ ಈ ವ್ಯಕ್ತಿಗೆ ತನ್ನ ಈ ಯತ್ನ ಭಾರೀ ದುಬಾರಿ ಎಂದು ಅರಿವಾಗುವುದರೊಳಗೆ 15 ಕೋಟಿ ರೂ. ಕೈಯಿಂದ ಜಾರಿ ಹೋಗಿದೆ.
ಡೇಟಿಂಗ್ ಅಪ್ಲಿಕೇಶನ್ ಕಾಂಡವೊಂದರ ಮಿಕವಾದ ಈ ವ್ಯಕ್ತಿ, ವೃತ್ತಿಯಲ್ಲಿ ವಿತ್ತೀಯ ವಿಶ್ಲೇಷಕನಾಗಿದ್ದಾನೆ! ಟಿಂಡರ್‌ನಲ್ಲಿ ಪರಿಚಯಗೊಂಡ ಮಹಿಳೆಯೊಬ್ಬಳು ತನ್ನನ್ನು ತಾನು ಹೂಡಿಕೆ ಬ್ರೋಕರ್ ಎಂದು ಪರಿಚಯಿಸಿಕೊಂಡಿದ್ದಾಳೆ. ಆಕೆಯ ಮೋಹಪಾಶದಲ್ಲಿ ಬಿದ್ದ ಈತ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವ ಮನಸ್ಸು ಮಾಡಿದ್ದಾನೆ.
ಹಾಂಕಾಂಗ್‌ನಲ್ಲಿ ವಾಸಿಸುತ್ತಿರುವ ಇಟಲಿಯ ಈ ವ್ಯಕ್ತಿ ಮೊದಲಿಗೆ ಟಿಂಡರ್‌ನಲ್ಲಿ ಬಂದ ಮೆಸೇಜ್ ಒಂದಕ್ಕೆ ಪ್ರತಿಕ್ರಿಯಿಸಿದ್ದಾನೆ. ಸಿಂಗಪುರ ಮೂಲದ ಹೂಡಿಕೆ ಬ್ರೋಕರ್ ಎಂದು ಹೇಳಿಕೊಂಡು ಕರೆ ಮಾಡಿದ ಮಹಿಳೆಯ ವಂಚನೆ ಜಾಲಕ್ಕೆ ಸಿಲುಕಿದ ಈತ, ಕೊನೆಗೆ ಈ ಸಂವಹನ ವಾಟ್ಸಾಪ್ ಸಂಭಾಷಣೆಗೆ ತಲುಪಿ, ರೊಮ್ಯಾಂಟಿಕ್ ಸಂಬಂಧಕ್ಕೆ ತಿರುಗಿದಂತೆ ಭಾಸವಾಗಿದೆ.
ಐದು ವಾರಗಳ ಕಾಲ ಹಂತಹಂತವಾಗಿ ಈತನಿಗೆ ವಂಚನೆಯ ಜಾಲ ಹೆಣೆದ ವಂಚಕಿ, ಇದೇ ಅವಧಿಯಲ್ಲಿ ಬೋಗಸ್ ಟ್ರೇಡಿಂಗ್ ಜಾಲತಾಣವೊಂದರ ಮೂಲಕ ಡಿಜಿಟಲ್ ಹಣದಲ್ಲಿ ಹೂಡಿಕೆ ಮಾಡುವಂತೆ ಆತನಿಗೆ ಪ್ರೇರೇಪಿಸಿದ್ದಾಳೆ.
ಮಾರ್ಚ್ 6 ಹಾಗೂ ಮಾರ್ಚ್ 23ರ ನಡುವಿನ ಅವಧಿಯಲ್ಲಿ ಸಂತ್ರಸ್ತ ವಂಚಕಿಯ ಖಾತೆಗೆ 14.2 ದಶಲಕ್ಷ ಹಾಂಕಾಂಗ್ ಡಾಲರ್ (14.8 ಕೋಟಿ ರೂ) ವರ್ಗಾವಣೆ ಮಾಡಿಬಿಟ್ಟಿದ್ದಾನೆ ! 9 ವಿವಿಧ ಬ್ಯಾಂಕುಗಳಲ್ಲಿ 22 ವಹಿವಾಟುಗಳ ಮೂಲಕ ಇಷ್ಟು ಹಣವನ್ನು ಆತ ಕಳೆದುಕೊಂಡಿದ್ದಾನೆ. ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಭಾರೀ ಲಾಭದಾಯಕ ನಡೆ ಎಂದು ನಂಬಿಕೊಂಡ ಸಂತ್ರಸ್ತನಿಗೆ ತಾನು ಇಷ್ಟೆಲ್ಲಾ ಹಣ ಹೂಡಿಕೆ ಮಾಡಿದರೂ ಅದು ಬಾರದೇ ಇದ್ದಿದ್ದನ್ನು ಕಂಡು ಅನುಮಾನ ಬಂದಿದೆ. ಈತ ನೀಡಿದ ಪೊಲೀಸ್ ದೂರಿನ ಮೇಲೆ ತನಿಖೆ ಕೈಗೆತ್ತಿಕೊಂಡಿದ್ದಾರೆ ಹಾಂಕಾಂಗ್ ಪೊಲೀಸರು.