ಬೆಂಗಳೂರು : ಶಸ್ತ್ರಗಳ ಮೂಲಕ ಯುದ್ಧವನ್ನು ಗೆಲ್ಲಬಹುದು , ಆದರೆ ಮನಸ್ಸನ್ನು ಗೆಲ್ಲುವುದು ತುಂಬಾ ಕಷ್ಟ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜೊತೆ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಪಥದಲ್ಲಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾಗಿ ಇಂದಿಗೆ 76 ವರ್ಷಗಳು ಕಳೆದಿವೆ. ಆದರೆ ಅವರ ಚಿಂತನೆಗಳು ನಮ್ಮ ನಡುವೆ ಇನ್ನೂ ಜೀವಂತವಾಗಿವೆ. ಶಸ್ತ್ರಗಳ ಮೂಲಕ ಯುದ್ಧವನ್ನು ಗೆಲ್ಲಬಹುದು , ಆದರೆ ಮನಸ್ಸನ್ನು ಗೆಲ್ಲುವುದು ತುಂಬಾ ಕಷ್ಟ ಎನ್ನುವ ಅವರ ಮಾತುಗಳು ಇಂದಿಗೂ ಪ್ರಸ್ತುತ.
ಕಾಂಗ್ರೆಸ್ ಪಕ್ಷ ಗಾಂಧೀಜಿಯವರ ತತ್ವಗಳನ್ನು ಅನುಸರಿಸುವ ಮೂಲಕ ಜನರ ಏಳಿಗೆಗೆ ಶ್ರಮಿಸುತ್ತಿದೆ. ಅದರಂತೆ ನಮ್ಮ ಗ್ಯಾರಂಟಿಗಳು ಕರುನಾಡ ಜನರ ಬದುಕನ್ನು ಬದಲಿಸಿದೆ. ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ಗಾಂಧಿಜಿಯವರು ಪ್ರಸ್ತಾಪಿಸಿದ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಇಂದು ಯಾವುದೇ ಸರ್ಕಾರ ಬರಲಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸ್ವತಂತ್ರ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ಗಾಂಧೀಜಿಯವರು ಹೊಂದಿದ್ದ ದೂರದೃಷ್ಟಿ ಎಂದಿಗೂ ಅನುಕರಣೀಯ ಎಂದು ಹೇಳಿದರು.