ಆಸ್ಟ್ರೇಲಿಯಾದ ಸಿಡ್ನಿಯ ಕೂಗೀ ಅಕ್ವೇರಿಯಂನಲ್ಲಿರುವ ಟೈಗರ್ ಶಾರ್ಕ್ ಮನುಷ್ಯನ ತೋಳನ್ನು ವಾಂತಿ ಮಾಡಿದೆ. ಇದರಿಂದ ಕೊಲೆ ತನಿಖೆ ನಡೆಸಲು ಪೊಲೀಸರಿಗೆ ಪ್ರೇರಣೆ ಸಿಕ್ಕಿದಂತಾಗಿರುವ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಶಾರ್ಕ್ ಅನ್ನು ಅಕ್ವೇರಿಯಂ ಮಾಲೀಕ ಬ್ರೆಟ್ ಹಾಬ್ಸನ್ ಸೆರೆಹಿಡಿದಿದ್ದಾರೆ. ಆದರೆ, ಸಂಜೆ 4:30 ರ ಸುಮಾರಿಗೆ, ಶಾರ್ಕ್ ಮೀನು ಒದ್ದಾಡಲು ಶುರುಮಾಡಿದೆ. ನಂತರ ಕೆಲವೇ ಕ್ಷಣಗಳಲ್ಲಿ ಇಲಿ ಮತ್ತು ಪಕ್ಷಿಯನ್ನು ವಾಂತಿ ಮಾಡಿದೆ. ಆದರೆ, ಮೀನು ಮಾನವನ ತೋಳನ್ನು ವಾಂತಿ ಮಾಡಿದಾಗ ಅಕ್ವೇರಿಯಂನಲ್ಲಿದ್ದವರಿಗೆಲ್ಲರಿಗೂ ಆಘಾತ ತಂದಿದೆ.
ಕೂಗೀ ಅಕ್ವೇರಿಯಂನಲ್ಲಿದ್ದ 13-ಅಡಿ ಉದ್ದದ ಶಾರ್ಕ್, ತನ್ನ ಬಾಯಿಯಿಂದ ಕತ್ತರಿಸಿದ ಮಾನವ ತೋಳನ್ನು ಹೊರಹಾಕಿದೆ. ಈ ಅಂಗವು ಜಿಮ್ಮಿ ಸ್ಮಿತ್‌ಗೆ ಸೇರಿದ್ದು ಎಂದು ಶೀಘ್ರದಲ್ಲೇ ಗುರುತಿಸಲಾಯಿತು.
ಕತ್ತರಿಸಿದ ತೋಳಿನ ಒಳಗಿನ ಮುಂದೋಳಿನ ಮೇಲೆ ಪ್ರಮುಖವಾದ ಹಚ್ಚೆ ಇತ್ತು. ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವ ಪ್ರಕಾರ, ಶಾರ್ಕ್‌ನ ಬಾಯಿಯಿಂದ ದಟ್ಟವಾದ ಕಂದು ನೊರೆಯೊಂದಿಗೆ ಏನೋ ಹೊರಬಂದಿದೆ. ಅದು ದುರ್ವಾಸನೆಯಿಂದ ಕೂಡಿತ್ತು ಎಂದು ಹೇಳಿದ್ದಾರೆ.
ಈ ಕಥೆಯಲ್ಲಿ ದೊಡ್ಡ ತಿರುವು ಕಂಡುಬಂದಿದ್ದು, ಪೊಲೀಸರ ತನಿಖೆ ವೇಳೆ ಸತ್ಯಾಂಶ ಬಯಲಾಗಿದೆ. ಸ್ಮಿತ್ ಎಂಬ ವ್ಯಕ್ತಿಯನ್ನು ಶಾರ್ಕ್ ಕಚ್ಚಿ ಸಾಯಿಸಿಲ್ಲ ಎಂಬುದು ತಿಳಿದುಬಂದಿದೆ.
ಸ್ಮಿತ್ ಸ್ಥಳೀಯ ಡ್ರಗ್ ಗ್ಯಾಂಗ್‌ನ ಸಹವರ್ತಿಯಾಗಿದ್ದು, ಈತನಿಗೆ ರೆಜಿನಾಲ್ಡ್ ಹೋಮ್ಸ್ ನೇತೃತ್ವ ವಹಿಸಿದ್ದ. ಇವರಿಬ್ಬರು ಕೂಡ ಮಾಜಿ ಸೈನಿಕ ಪ್ಯಾಟ್ರಿಕ್ ಬ್ರಾಡಿ ಎಂಬಾತನ ಜೊತೆ ಕೈಜೋಡಿಸಿದ್ದರು. ಆದರೆ ಈ ಮೂವರ ಮಧ್ಯೆ ಏನೋ ಜಗಳವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂದು ಹೇಳಲಾಗಿದೆ. ಈ ಸಂಬಂಧ ಬ್ರಾಡಿಯನ್ನು ಬಂಧಿಸಿದ್ರೂ, ಶವವಿಲ್ಲದೆ ಕೊಲೆಯನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.