ಬೆಂಗಳೂರು : ಟೆಕ್ಕಿಯೋರ್ವ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ಶೀಗೆಹಳ್ಳಿಯ ಸಾಯಿ ಗಾರ್ಡನ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಆಂಧ್ರ ಪ್ರದೇಶ ಮೂಲದ ವೀರಾರ್ಜುನ ವಿಜಯ್ (31) ಎಂಬಾತ ತಮ್ಮ ಪತ್ನಿ ಹೇಮಾವತಿ(29) ಮತ್ತು ಒಂದೂವರೆ ವರ್ಷ ಮತ್ತು 8 ತಿಂಗಳ ಎರಡು ಹೆಣ್ಣುಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಾರ್ಜುನ ವಿಜಯ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣಕಾಸು ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಊಟದಲ್ಲಿ ವಿಷ ಹಾಕಿ ಹೆಂಡತಿ ಮಕ್ಕಳನ್ನು ಕೊಂದು, ಆ ನಂತರ ತಾನು ಕೂಡ ಅದೇ ಆಹಾರ ತಿಂದು ವಿಜಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಕಳೆದ 3 ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಆದರೆ ತಡವಾಗಿ ಬೆಳಕಿಗೆ ಬಂದಿದೆ. 3 ದಿನ ಆದರೂ ಮನೆ ಬಾಗಿಲು ತೆರೆಯದ ಹಿನ್ನೆಲೆ ಅನುಮಾನಗೊಂಡ ಸ್ಥಳೀಯರು ಕಿಟಕಿ ಮೂಲಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ.