ರಾಯಚೂರು: ಎರಡನೇ ತರಗತಿಯ ವಿದ್ಯಾರ್ಥಿ ಮೇಲೆ ಶಿಕ್ಷಕಿಯೊಬ್ಬಳು ಕುದಿಯುವ ನೀರು ಸುರಿದು ಅಟ್ಟಹಾಸ ಮೆರೆದಿರುವ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕಲ್ಲೂರಿನಲ್ಲಿ ನಡೆದಿದೆ.
ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿ ತಲುಪಿರುವ 8 ವರ್ಷದ ಪುಟ್ಟ ಬಾಲಕ ಲಿಖಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ದೇಹ ಶೇ.40ರಷ್ಟು ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ಕೋಪಗೊಂಡ ಶಿಕ್ಷಕಿ ವಿದ್ಯಾರ್ಥಿ ಮೇಲೆ ಕುದಿಯುತ್ತಿದ್ದ ನೀರನ್ನು ಎರಚಿದ್ದಾಳೆ. ಆಗಸ್ಟ್ 2 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಶಿಕ್ಷಕಿ ವಿರುದ್ಧ ದೂರು ದಾಖಲಿಸಲು ಮಸ್ಕಿ ಪೊಲೀಸರು ಹಿಂದೇಟು ಹಾಕಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ್ದು, ಸುಟ್ಟಗಾಯಗಳಿಂದ ಬಳಲುತ್ತಿರುವ ಬಾಲಕನನ್ನು ಈವರೆಗೂ ಬಂದು ಭೇಟಿಯಾಗಿಲ್ಲ. ಶಿಕ್ಷಕಿಯ ದರ್ಪದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.