ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ ಪ್ರತಿಫಲನಗೊಳ್ಳುತ್ತದೆ ಎಂಬುದನ್ನು ನೋಡೋಣ.
ನಾಲಗೆಯ ಮೇಲಿರುವ ಸಣ್ಣ ಸಣ್ಣ ಬೀಜಗಳಂಥ ರಚನೆಗಳು ಮಾಯವಾಗಿ ನಕ್ಷೆಯಂತೆ ಪ್ಲೈನ್ ಆಗಿದ್ದರೆ ಅವರ ರಕ್ತದೊತ್ತಡ, ಸಕ್ಕರೆ ಕಾಯಿಲೆ ಅಥವಾ ಅಸ್ತಮಾ ಸಮಸ್ಯೆ ಬಿಗಡಾಯಿಸಿದೆ ಎಂದು ಊಹಿಸಬಹುದು. ಕೆಲವೊಮ್ಮೆ ಮಾನಸಿಕ ಒತ್ತಡ, ಕಡಿಮೆ ರೋಗ ನಿರೋಧಕ ಶಕ್ತಿ ಮತ್ತು ಅಪೌಷ್ಟಿಕತೆಯಿಂದಲೂ ಇದು ಉಂಟಾಗುತ್ತದೆ.
ಕೆಲವರಿಗೆ ಬಿಸಿ ಅಥವಾ ಖಾರ ವಸ್ತುಗಳನ್ನು ಸೇವಿಸಿದಾಗ ನಾಲಿಗೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸಾ ರೂಪದಲ್ಲಿ ಸತು ಮತ್ತು ವಿಟಿಮಿನ್ ಎ ನೀಡಲಾಗುತ್ತದೆ.
ನಾಲಿಗೆಯ ಮೇಲೆ ಕೆಲವೊಮ್ಮೆ ಕಪ್ಪು ಅಥವಾ ಕಾಫಿ ಬಣ್ಣದ ಕಲೆ ಕಾಣಿಸಿಕೊಳ್ಳುತ್ತದೆ. ಇದರಿಂದ ಬಾಯಿಯ ದುರ್ವಾಸನೆಯೂ ಹೆಚ್ಚು. ಅತಿಯಾದ ಧೂಮಪಾನ, ಕಾಫಿ ಸೇವನೆ, ತೆಗೆದುಕೊಳ್ಳುವ ಮಾತ್ರೆಗಳ ಅಡ್ಡ ಪರಿಣಾಮದಿಂದ ಹೀಗಾಗಿರಬಹುದು ಎಂದು ಊಹಿಸಬಹುದು.
ನಾಲಿಗೆಯ ಮೇಲೆ ಬಿಳಿ ಮಚ್ಚೆಗಳಿದ್ದರೆ ಉದರ ಸಂಬಂಧಿ ಸಮಸ್ಯೆಗಳ ಲಕ್ಷಣಗಳು ಎನ್ನಬಹುದು. ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು, ಶಿಲೀಂಧ್ರಗಳಿಂದ ಉಂಟಾಗುವ ಸೋಂಕಿನಿಂದ ಇವು ಕಂಡುಬರುತ್ತವೆ. ಹಲ್ಲುಗಳಂತೆ ನಿತ್ಯ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಮುಖ್ಯ ಎಂಬುದನ್ನು ಮರೆಯದಿರಿ.