ತುಮಕೂರು: ಒಂದು ಇಲಾಖೆಯಲ್ಲಿ ಸಸ್ಪೆಂಡ್ ಆದ ಅಧಿಕಾರಿ ಮತ್ತೊಂದು ಇಲಾಖೆಗೆ ನೇಮಕಗೊಂಡಿದ್ದು, ಸರ್ಕರದ ಕಾರ್ಯವೈಖರಿ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಯಿಂದ ಅಮಾನತುಗೊಂಡಿದ್ದ ಅಧಿಕಾರಿಯನ್ನು ಸಚಿವ ಸತೀಶ್ ಜಾರಕಿಹೊಳಿ ಅವರ ಇಲಾಖೆಗೆ ನೇಮಕ ಮಾಡಿಕೊಳ್ಳಲಾಗಿದ್ದು, ಸರ್ಕಾರದ ಸಚಿವರುಗಳ ಕಾರ್ಯವೈಖರಿ ಅಚ್ಚರಿ ತಂದಿದೆ.
ಪಂಚಾಯತ್ ರಾಜ್ ಇಲಾಖೆಯ ತುಮಕೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಸ್.ಆರ್.ಹರೀಶ್ ಟೆಂಡರ್ ಕರೆಯುವಲ್ಲಿ ವಿಳಂಬ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 2 ಕೋಟಿ 72 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ಅಮಾನತು ಮಾಡಿದ್ದರು.
ಹೀಗೆ ಅಮಾನತುಗೊಂಡು ಒಂದು ತಿಂಗಳ ಒಳಗಾಗಿ ಅಧಿಕಾರಿ ಎಸ್.ಆರ್.ಹರೀಶ್, ತುಮಕೂರು ವಿಭಾಗದಲ್ಲೇ ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವರೇ ನೇಮಕ ಮಾಡಿದ್ದಾರೆ ಎನ್ನಲಾಗುತ್ತಿದೆ. ಕರ್ತವ್ಯ ಲೋಪಕ್ಕೆ ಒಂದು ಇಲಾಖೆಯಿಂದ ಸಸ್ಪೆಂಡ್ ಆದ ಅಧಿಕಾರಿ ಈಗ ಮತ್ತೊಂದು ಇಲಾಖೆಗೆ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.