ಕೆಲವರಿಗೆ ಅಯ್ಯೋ ತಾನೇನು ಜೀವನದಲ್ಲಿ ಸಾಧಿಸಿಲ್ಲ, ತಾನು ಅದಾಗಬೇಕು, ಇದಾಗಬೇಕಿತ್ತು ಆದರೆ, ಏನೂ ಮಾಡಲಾಗಿಲ್ಲ ಅಂತಾ ಕೊರಗುತ್ತಾ ಕೂರುವವರಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಮಾರ್ಕ್ಸ್ ಬಂದಿಲ್ಲ, ಬರೆಯಲಾಗಲಿಲ್ಲ ಅಂತೆಲ್ಲಾ ಬೇಸರಪಟ್ಟುಕೊಳ್ಳುವವರು ಇದ್ದಾರೆ. ಅಂಥವರು ಈ ಸ್ಟೋರಿ ಓದಿ ಸಾಕು, ಈತನಿಂದ ನೀವು ಸ್ಪೂರ್ತಿ ಪಡೆಯಬಹುದು.
ಹೌದು, ಲಕ್ನೋದಲ್ಲಿ ತುಷಾರ್ ವಿಶ್ವಕರ್ಮ ಎಂಬಾತ ಪಿಯುಸಿಯಲ್ಲಿ ಶೇಕಡಾ 70 ಅಂಕ ಗಳಿಸಿದ್ದಾನೆ. ಅಯ್ಯೋ, ಇದರಲ್ಲೇನು ವಿಶೇಷ ? 70% ಅಂಕ ಏನು ಮಹಾ ಸಾಧನೆ ಅಂತಾ ಅನ್ಕೋಬೇಡಿ. ಈತ ಎಲ್ಲರಂತೆ ಕೈಗಳಲ್ಲಿ ಪರೀಕ್ಷೆ ಬರೆದಿಲ್ಲ. ತನ್ನ ಕಾಲುಬೆರಳುಗಳ ಮೂಲಕ ಪರೀಕ್ಷೆ ಬರೆದು 70 ಶೇಕಡಾ ಅಂಕ ಗಳಿಸಿದ್ದಾನೆ.
ಕ್ರಿಯೇಟಿವ್ ಕಾನ್ವೆಂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ತುಷಾರ್, ಹುಟ್ಟಿನಿಂದಲೂ ಅಂಗವೈಕಲ್ಯ ಹೊಂದಿದ್ದರಿಂದ ಈತನಿಗೆ ಕೈಯಲ್ಲಿ ಬರೆಯುವ ಸಾಮರ್ಥ್ಯವಿಲ್ಲ. ಆದರೆ ತನ್ನ ಅಣ್ಣಂದಿರನ್ನು ನೋಡಿದ ಈತನಿಗೆ ತಾನು ಶಾಲೆಗೆ ಹೋಗಬೇಕೆಂದು ನಿರ್ಧರಿಸಿದ್ದ. ನಂತರ ತನ್ನ ಕಾಲ್ಬೆರಳುಗಳ ಸಹಾಯದಿಂದ ಬರೆಯಲು ಆರಂಭಿಸಿದನು. ಅಲ್ಲದೆ ಈ ವರ್ಷ ತುಷಾರ್, ಬರಹಗಾರನ ಸಹಾಯ ಪಡೆಯಲು ಅಥವಾ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ಪಡೆಯುವುದನ್ನು ನಿರಾಕರಿಸಿದನು. ಇತರೆ ವಿದ್ಯಾರ್ಥಿಗಳು ತೆಗೆದುಕೊಳ್ಳುವಷ್ಟೇ ಕಾಲಾವಕಾಶ ತೆಗೆದುಕೊಂಡು ಪರೀಕ್ಷೆ ಬರೆದಿದ್ದಾನೆ.
‘’ಹುಟ್ಟಿದಾಗಿನಿಂದ, ನನ್ನ ಎರಡೂ ಕೈಗಳು ಕಾರ್ಯನಿವರ್ಹಿಸುವ ಸಾಮರ್ಥ್ಯ ಹೊಂದಿಲ್ಲ. ಆದರೆ ನಾನು ಅದನ್ನು ಎಂದಿಗೂ ನ್ಯೂನ್ಯತೆ ಎಂದು ಭಾವಿಸಿಲ್ಲ. ನನ್ನ ಇಬ್ಬರು ಅಣ್ಣಂದಿರು ಶಾಲೆಗೆ ಹೋದಾಗ, ನಾನು ಹೋಗಬೇಕೆಂದು ಪೋಷಕರಲ್ಲಿ ವಿನಂತಿಸಿದೆ. ಹೀಗಾಗಿ ನನ್ನ ಕಾಲ್ಬೆರಳುಗಳನ್ನೇ ಕೈಗಳಂತೆ ಉಪಯೋಗಿಸಿ ಬರೆಯಲು ಪ್ರಾರಂಭಿಸಿದೆ’’ ಎಂದು ತುಷಾರ್ ಹೇಳಿದ್ದಾರೆ. ಜೊತೆಗೆ ತುಷಾರ್ ಇಂಜಿನಿಯರ್ ಆಗುವ ಆಕಾಂಕ್ಷೆ ಹೊಂದಿದ್ದು, ತನಗೆ ಬೆಂಬಲವಾಗಿ ನಿಂತ ಶಿಕ್ಷಕರಿಗೂ ಧನ್ಯವಾದ ಅರ್ಪಿಸಿದ್ದಾನೆ.