ವಿದ್ಯಾರ್ಥಿಗಳು ದಾರಿ ತಪ್ಪಿದ ವೇಳೆ ಶಿಕ್ಷಕರು ಅವರುಗಳಿಗೆ ಬುದ್ಧಿ ಹೇಳುವುದು ಸಾಮಾನ್ಯ ಸಂಗತಿ. ಒಂದೊಮ್ಮೆ ವಿದ್ಯಾರ್ಥಿಗಳ ವರ್ತನೆ ಮಿತಿ ಮೀರಿದರೆ ಪೋಷಕರಿಗೂ ವಿಷಯ ತಿಳಿಸುತ್ತಾರೆ. ಹೀಗೆ ತರಗತಿಗೆ ಪದೇ ಪದೇ ನಿಮ್ಮ ಮಗ ಗೈರು ಹಾಜರಾಗುತ್ತಾನೆ ಎಂದು ಉಪನ್ಯಾಸಕರೊಬ್ಬರು ವಿದ್ಯಾರ್ಥಿಯ ಪೋಷಕರಿಗೆ ಹೇಳಿದ ಕಾರಣಕ್ಕೆ ಆ ವಿದ್ಯಾರ್ಥಿ ಮಚ್ಚು ತೋರಿಸಿ ಬೆದರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಾಲೇಜ್ ಒಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ತಮ್ಮ ವಿದ್ಯಾರ್ಥಿ ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಹಾಗೂ ಆತನ ವರ್ತನೆಯಲ್ಲೂ ಬದಲಾವಣೆ ಕಾಣುತ್ತಿದೆ ಎಂಬುದನ್ನು ಗಮನಿಸಿದ ಉಪನ್ಯಾಸಕರೊಬ್ಬರು ಆತನ ತಂದೆ – ತಾಯಿಗಳ ಬಳಿ ವಿಷಯ ತಿಳಿಸಿ ಬುದ್ಧಿ ಹೇಳುವಂತೆ ಸಲಹೆ ನೀಡಿದ್ದರು. ಇದು ಆ ವಿದ್ಯಾರ್ಥಿಯ ಆಕ್ರೋಶಕ್ಕೆ ಕಾರಣವಾಗಿತ್ತು.
ಮರುದಿನ ಮಾಸ್ಕ್ ಧರಿಸಿ ಮಚ್ಚು ಹಿಡಿದುಕೊಂಡು ಬೈಕಿನಲ್ಲಿ ಬಂದ ಈ ವಿದ್ಯಾರ್ಥಿ ನೇರವಾಗಿ ಉಪನ್ಯಾಸಕರಿದ್ದ ಕೊಠಡಿಗೆ ತೆರಳಿದ್ದಾನೆ. ಮಚ್ಚು ತೋರಿಸಿ ಅವರಿಗೆ ಬೆದರಿಕೆ ಹಾಕಿದ ಆತ, ನನ್ನ ವಿಷಯಕ್ಕೆ ಬಂದರೆ ನಿಮಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಉಪನ್ಯಾಸಕರು ಒಂದು ಕ್ಷಣ ವಿಚಲಿತಗೊಂಡಿದ್ದು, ಆದರೆ ಈ ವಿದ್ಯಮಾನ ಗಮನಿಸಿದ ಸಹ ಉಪನ್ಯಾಸಕರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಕಾಲೇಜಿಗೆ ಆಗಮಿಸಿದ ಪೊಲೀಸರು, ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಮಚ್ಚು ಹಾಗೂ ಬೈಕನ್ನು ಕಸಿದುಕೊಂಡಿದ್ದಾರೆ. ಅಲ್ಲದೆ ಆ ವಿದ್ಯಾರ್ಥಿಯ ತಂದೆ – ತಾಯಿಗೂ ವಿಷಯ ತಿಳಿಸಿದ್ದು, ಅವರು ಬಂದ ಬಳಿಕ ಇನ್ನು ಮುಂದೆ ಈ ವರ್ತನೆ ಮಾಡದಂತೆ ಪುಂಡಾಟಿಕೆ ಮೆರೆದ ವಿದ್ಯಾರ್ಥಿಯಿಂದ ಮುಚ್ಚಳಿಕೆ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.