![](https://kannadadunia.com/wp-content/uploads/2022/12/1121701-coconut-tea.jpg)
ಶುಂಠಿ ಮತ್ತು ಮಸಾಲೆ ಚಹಾವನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ತೆಂಗಿನ ಹಾಲಿನಲ್ಲಿ ಮಾಡಿದ ಚಹಾವನ್ನು ಎಂದಾದರೂ ಟೇಸ್ಟ್ ಮಾಡಿದ್ದೀರಾ? ರುಚಿಯ ಜೊತೆಗೆ ತೆಂಗಿನ ಹಾಲಿನಲ್ಲಿ ಮಾಡಿದ ಚಹಾ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಎಳನೀರಿನಂತೆ ತೆಂಗಿನ ಹಾಲಿನ ಚಹಾ ಕೂಡ ಚಳಿಗಾಲದಲ್ಲಿ ಭರಪೂರ ಅನುಕೂಲಗಳನ್ನು ಮಾಡಿಕೊಡುತ್ತದೆ.
ಚಳಿಗಾಲದಲ್ಲಿ ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹಾಗಾಗಿ ಸೋಂಕನ್ನು ತಪ್ಪಿಸಲು ನೀವು ತೆಂಗಿನ ಹಾಲಿನ ಚಹಾವನ್ನು ಬಳಸಬಹುದು. ಬೇಗನೆ ಕಾಯಿಲೆಗೆ ತುತ್ತಾಗುವವರು ಇದನ್ನು ಬಳಕೆ ಮಾಡುವುದು ಸೂಕ್ತ. ಈ ಚಹಾ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಬೇಗ ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿವೆ.
ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿ ತುಂಬಾ ಗೊಂದಲಮಯವಾಗಿದೆ. ಈ ಕಾರಣದಿಂದಾಗಿ ಎಲ್ಲರಲ್ಲೂ ಹೃದಯದ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ತೆಂಗಿನ ಹಾಲಿನಲ್ಲಿ ಮಾಡಿದ ಚಹಾವು ಎಚ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡದಿಂದ ರಕ್ಷಣೆ ನೀಡುತ್ತದೆ. ತೆಂಗಿನಕಾಯಿ ಹಾಲಿನ ಚಹಾದಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕಂಡುಬರುತ್ತದೆ. ಈ ಕಾರಣದಿಂದಾಗಿ ತೆಂಗಿನ ಹಾಲಿನ ಚಹಾವನ್ನು ಕುಡಿಯುವುದರಿಂದ ತೂಕವನ್ನು ಸಹ ನಿಯಂತ್ರಿಸಬಹುದು. ಇದಲ್ಲದೆ ಈ ಚಹಾವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಕೊಬ್ಬು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ.
ತೆಂಗಿನಕಾಯಿ ಹಾಲಿನ ಚಹಾವನ್ನು ತಯಾರಿಸುವುದು ಹೇಗೆ?
ತೆಂಗಿನ ಹಾಲಿನ ಚಹಾ ಮಾಡಲು 3 ಕಪ್ ನೀರು, 1 ಕಪ್ ತೆಂಗಿನ ಹಾಲು, 1/2 ಕಪ್ ಹೆವಿ ಕ್ರೀಮ್, 2 ಬ್ಯಾಗ್ ಗ್ರೀನ್ ಟೀ, 1 ಟೀ ಚಮಚ ಬ್ರೌನ್ ಶುಗರ್ ಬೇಕಾಗುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ಅದರಲ್ಲಿ ಗ್ರೀನ್ ಟೀ ಬ್ಯಾಗ್‌ಗಳನ್ನು ಹಾಕಿ. ಇದಕ್ಕೆ ತೆಂಗಿನ ಹಾಲು ಸೇರಿಸಿ ಮತ್ತು ಹೆವಿ ಕ್ರೀಮ್ ಮಿಶ್ರಣ ಮಾಡಿ. ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಟೀ ಬ್ಯಾಗ್‌ಗಳನ್ನು ಹೊರತೆಗೆಯಿರಿ. ರುಚಿ ಹೆಚ್ಚಿಸಲು ಬ್ರೌನ್ ಶುಗರ್ ಸೇರಿಸಿಕೊಳ್ಳಿ. ಬಿಸಿ ಬಿಸಿ ತೆಂಗಿನ ಹಾಲಿನ ಚಹಾ ಸಿದ್ಧವಾಗುತ್ತದೆ.