ಬೆಂಗಳೂರು : ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತಿ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಮಾಜಕ್ಕೆ ಮಾರಕವಾಗಿರುವ ಸುಳ್ಳು ಸುದ್ದಿಗಳ ನಿಯಂತ್ರಣಕ್ಕಾಗಿ ಪ್ರತಿ ಜಿಲ್ಲೆಗೊಂದರಂತೆ ವಿಶೇಷ ಘಟಕಗಳನ್ನು ಆರಂಭಿಸಲಾಗಿದೆ. ಇದರ ಜೊತೆಗೆ ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಿ ಸತ್ಯವನ್ನು ಜನರಿಗೆ ತಿಳಿಸಲು ಫ್ಯಾಕ್ಟ್ ಚೆಕ್ ಗಳನ್ನು ಕೂಡ ಆರಂಭಿಸಲಾಗಿದೆ. ಜನರಿಗೆ ಸತ್ಯವನ್ನು ಮಾತ್ರ ತಲುಪಿಸುವುದು ಸರ್ಕಾರ, ಮಾಧ್ಯಮಗಳು ಸೇರಿದಂತೆ ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಿಷ್ಪಕ್ಷಪಾತ, ವಸ್ತುನಿಷ್ಠ ವರದಿಗಳ ಮೂಲಕ ಆಳುವ ವರ್ಗದ ಜೊತೆಗೆ ಸಮಾಜವನ್ನು ಸದಾ ಜಾಗೃತ ಸ್ಥಿತಿಯಲ್ಲಿಡುವ ಗುರುತರವಾದ ಹೊಣೆ ಇಂದಿನ ಮಾಧ್ಯಮ ರಂಗದ ಮೇಲಿದೆ. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾದ ಮಾಧ್ಯಮಗಳು ಜನರ ದನಿಯಾಗಿ ವೃತ್ತಿಧರ್ಮವನ್ನು ಎತ್ತಿಹಿಡಿಯುತ್ತಾ, ಸಶಕ್ತ ಭಾರತ ನಿರ್ಮಾಣಕ್ಕಾಗಿ ಮುಂದೆಯೂ ಶ್ರಮಿಸಲಿ ಎಂದು ಆಶಿಸುತ್ತೇನೆ. ಮಾಧ್ಯಮ ಮಿತ್ರರೆಲ್ಲರಿಗೂ ಪತ್ರಿಕಾ ದಿನದ ಶುಭಾಶಯಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.