ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ತಿನಿಸುಗಳನ್ನು ತಿನ್ನುವ ಹವ್ಯಾಸ ಹೆಚ್ಚುತ್ತಿದೆ. ಇಂತಹ ಅನೇಕ ತಿನಿಸುಗಳು ಇಂಟರ್ನೆಟ್‌ನಲ್ಲೂ ವೈರಲ್ ಆಗುತ್ತವೆ. ಸ್ಮೋಕ್ ಪಾನ್ ಅಥವಾ ಫೈರ್ ಪಾನ್ ಕೂಡ ಇವುಗಳಲ್ಲೊಂದು. ಹೊಗೆಯಾಡುವ ಬೀಡಾವನ್ನು ಬಾಯಲ್ಲಿಟ್ಟುಕೊಂಡು ಎಂಜಾಯ್ ಮಾಡುವ ಫೋಟೋ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ.
ಈ ಪಾನ್‌ನಲ್ಲಿ ವೀಳ್ಯದೆಲೆ, ಕ್ಯಾಟೆಚು, ಗುಲ್ಕಂಡ್, ಸಿಹಿ ಚಟ್ನಿ ಮತ್ತು ಏಲಕ್ಕಿಯನ್ನು ಹೊರತುಪಡಿಸಿ, ದ್ರವ ಸಾರಜನಕವನ್ನು ಬಳಸಲಾಗುತ್ತದೆ. ಇದರಿಂದಾಗಿ ಪಾನ್‌ನಲ್ಲಿ ಹೊಗೆ ಬರುತ್ತದೆ. ಈ ಸ್ಮೋಕಿ ಬೀಡಾ ಮಾರಣಾಂತಿಕವಾಗಬಹುದು. ಸ್ಟೈಲ್‌ಗಾಗಿ ಸ್ಮೋಕ್ ಪಾನ್ ತಿನ್ನಲು ಹೋಗಿ ಪ್ರಾಣಕ್ಕೇ ಅಪಾಯ ತಂದುಕೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಇಂಥದ್ದೇ ಪ್ರಕರಣವೊಂದು ಇತ್ತೀಚೆಗೆ ನಡೆದಿದೆ. ಸ್ಮೋಕ್ ಪಾನ್ ಸೇವಿಸಿದ 12 ವರ್ಷದ ಬಾಲಕಿಗೆ ಹೊಟ್ಟೆಯಲ್ಲಿ ರಂಧ್ರವಾಗಿದೆ. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಬಾಲಕಿಯನ್ನು ಬದುಕಿಸಿದ್ದಾರೆ. ಮದುವೆ ಸಮಾರಂಭವೊಂದರಲ್ಲಿ ಬಾಲಕಿ ಸ್ಮೋಕ್ ಪಾನ್ ಸೇವಿಸಿದ್ದಳು. ‘ಇಂಟ್ರಾ-ಆಪ್ ಒಜಿಡಿ ಸ್ಕೋಪಿ’ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಬಾಲಕಿಯನ್ನು ಬಚಾವ್ ಮಾಡಿದ್ದಾರೆ. ಎರಡು ದಿನ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿತ್ತು. ಈ ಘಟನೆಯ ಬಳಿಕವಾದರೂ ಜನರು ಎಚ್ಚೆತ್ತುಕೊಂಡು ಇಂತಹ ವಿಚಿತ್ರ ತಿನಿಸುಗಳಿಂದ ದೂರವಿರುವುದು ಉತ್ತಮ.