‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತಿದೆ. ಕೆಲವರು ಸಿಕ್ಕಿದ್ದನ್ನೆಲ್ಲಾ ತಿಂದರೆ, ಮತ್ತೆ ಕೆಲವರು ಎಲ್ಲವನ್ನು ಅಳತೆಯಲ್ಲೇ ಸೇವಿಸುತ್ತಾರೆ.
ಹಿತಮಿತವಾಗಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಊಟದ ಮೇಲೆಯೂ ನಿಗಾ ವಹಿಸುವುದು ಒಳಿತು. ಕೆಲವರಿಗೆ ಕರಿದ ತಿಂಡಿ ತಿನ್ನಲು ಹೆಚ್ಚಿನ ಇಷ್ಟ. ಮತ್ತೆ ಕೆಲವರು ಇವುಗಳಿಂದ ಸದಾ ದೂರವಿರುತ್ತಾರೆ. ಊಟವನ್ನು ಅಷ್ಟೇ, ಹಿತಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಬೆಳಿಗ್ಗೆ ರಾಜನಂತೆ ತಿಂಡಿ ಸೇವಿಸಿ, ಮಧ್ಯಾಹ್ನ ಸಾಮಾನ್ಯನಂತೆ ಊಟ ಮಾಡಿ, ರಾತ್ರಿ ಊಟವನ್ನು ಬಡವರಂತೆ ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಊಟ, ತಿಂಡಿಯನ್ನು ವಿಳಂಬವಾಗಿ ಇಲ್ಲವೇ ಬೇಗನೇ ಮಾಡುವುದು ಒಳ್ಳೆಯದಲ್ಲ. ಊಟ ಮತ್ತು ತಿಂಡಿಯ ನಡುವೆ ನಿಯಮಿತ ಅಂತರ ಇರಲಿ. ದಿನಚರಿಯಲ್ಲಿ ಇದನ್ನು ಸರಿಯಾಗಿ ರೂಢಿಸಿಕೊಂಡರೆ ಒಳ್ಳೆಯದು.
ಇಂದಿನ ಜೀವನಶೈಲಿ, ಅಡುಗೆ, ಆಹಾರ ಪದಾರ್ಥಗಳು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ರಾತ್ರಿ ಗಟ್ಟಿ ಪದಾರ್ಥಗಳನ್ನು ತಿನ್ನಬಾರದು. ಜೀರ್ಣಕ್ರಿಯೆಗೆ ಅನುಕೂಲವಾಗುವಂತಹ ಆಹಾರವನ್ನು ಸೇವಿಸಬೇಕು. ನಾಲಿಗೆ ರುಚಿಗೆ ಹೆಚ್ಚಿನ ಒತ್ತು ಕೊಡದೇ, ಒಂದಿಷ್ಟು ಕಡಿವಾಣ ಹಾಕಿ, ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎನ್ನುವುದು ಅನುಭವಸ್ಥರ ಮಾತಾಗಿದೆ.