ಮಕ್ಕಳನ್ನು ಹೊಂದಬೇಕು ಅನ್ನೋದು ಬಹುತೇಕ ಎಲ್ಲಾ ದಂಪತಿಗಳ ಆಸೆ. ಆದರೆ ಕೆಲವೊಂದು ಆರೋಗ್ಯ ಸಂಬಂಧಿ ತೊಂದರೆಗಳಿಂದಾಗಿ ಅನೇಕರಿಗೆ ಮಕ್ಕಳಾಗುವುದಿಲ್ಲ. ಪುರುಷರಲ್ಲಿ ವೀರ್ಯದ ಕೊರತೆ ಕೂಡ ಬಂಜೆತನಕ್ಕೆ ಪ್ರಮುಖ ಕಾರಣ. ಪುರುಷರಲ್ಲಿ ಸ್ಪರ್ಮ್ ಕೌಂಟ್ ಕಡಿಮೆಯಿದ್ದರೆ ಮಹಿಳೆ ಗರ್ಭಧರಿಸಲು ಸಾಧ್ಯವಾಗುವುದಿಲ್ಲ. ವೀರ್ಯದ ಸಂಖ್ಯೆಯನ್ನು ಹೆಚ್ಚಿಸಲು ಯಾವುದೇ ಚಿಕಿತ್ಸೆ ಇಲ್ಲ, ಆದರೆ ಕೆಲವು ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ಇದನ್ನು ನೈಸರ್ಗಿಕವಾಗಿಯೇ ಸಾಧಿಸಬಹುದು.
ಆರೋಗ್ಯಕರ ಆಹಾರ
ಉತ್ತಮ ಪೋಷಣೆ ವೀರ್ಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಿ. ಇದರೊಂದಿಗೆ ಜಂಕ್ ಫುಡ್, ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿ.
ನಿಯಮಿತ ವ್ಯಾಯಾಮ
ನಿಯಮಿತ ವ್ಯಾಯಾಮವು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವೀರ್ಯ ಉತ್ಪಾದನೆಗೆ ಅಗತ್ಯವಾದ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ವಾರದಲ್ಲಿ ಕನಿಷ್ಠ 30 ನಿಮಿಷಗಳ ಮಧ್ಯಮ ಅಥವಾ ತೀವ್ರವಾದ ವ್ಯಾಯಾಮವನ್ನು ಮಾಡಲು ಪ್ರಯತ್ನಿಸಿ.
ಒತ್ತಡ ನಿವಾರಣೆ
ಒತ್ತಡವು ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಯೋಗ, ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮವನ್ನು ಮಾಡಬೇಕು. ಇದು ಒತ್ತಡ ಕಡಿಮೆ ಮಾಡುತ್ತದೆ.
ಒಳ್ಳೆಯ ನಿದ್ರೆ
ನಿದ್ರೆಯ ಸಮಯದಲ್ಲಿ ದೇಹವು ಟೆಸ್ಟೋಸ್ಟೆರಾನ್ ಸೇರಿದಂತೆ ಅನೇಕ ಅಗತ್ಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ನಿದ್ರೆಯ ಕೊರತೆಯು ವೀರ್ಯದ ಉತ್ಪಾದನೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ.
ಉಷ್ಣ ವಸ್ತುಗಳಿಂದ ದೂರವಿರಿ
ವೃಷಣಗಳ ಉಷ್ಣತೆಯು ದೇಹದ ಉಳಿದ ಭಾಗಗಳಿಗಿಂತ ಸ್ವಲ್ಪ ಕಡಿಮೆ ಇರಬೇಕು. ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದನ್ನು ತಪ್ಪಿಸಿ. ವಿಪರೀತ ಬಿಸಿನೀರಲ್ಲಿ ಸ್ನಾನ ಮಾಡಬಾರದು. ಪುರುಷರು ಲ್ಯಾಪ್‌ಟಾಪ್ ಅನ್ನು ಮಡಿಲಲ್ಲಿ ಇಟ್ಟುಕೊಂಡು ಕೆಲಸ ಮಾಡಬಾರದು.