ತಲೆನೋವು ಸಾಮಾನ್ಯ ಆರೋಗ್ಯ ಸಮಸ್ಯೆ. ಕೆಲವೊಮ್ಮೆ ಆಯಾಸ ಅಥವಾ ಒತ್ತಡದಿಂದ ಉಂಟಾಗುತ್ತದೆ. ಆದರೆ ತಲೆನೋವು ತುಂಬಾ ತೀವ್ರವಾಗಿದ್ದರೆ ನಿರ್ಲಕ್ಷಿಸಬಾರದು. ವಿಶೇಷವಾಗಿ ಔಷಧಿಗಳಿಂದಲೂ ತಲೆನೋವು ಗುಣವಾಗದೇ ಇದ್ದಲ್ಲಿ ಮೆದುಳಿನಲ್ಲಿ ಗೆಡ್ಡೆ ಬೆಳೆದಿರುವ ಸಾಧ್ಯತೆ ಇರುತ್ತದೆ. ಆದರೆ ಪ್ರತಿ ತಲೆನೋವು ಮೆದುಳಿನ ಗಡ್ಡೆಯಿಂದಲೇ ಬರುತ್ತದೆ ಎಂದು ಅರ್ಥವಲ್ಲ. ಆದರೆ ಕೆಲವು ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಮೆದುಳಿನ ಗೆಡ್ಡೆಯನ್ನು ಸೂಚಿಸುವ ತಲೆನೋವು ಲಕ್ಷಣಗಳು…
ತಲೆನೋವು ನಿರಂತರವಾಗಿದ್ದರೆ ಮತ್ತು ಔಷಧಿ ಸೇವಿಸಿದ ನಂತರವೂ ಗುಣವಾಗದಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಾಮಾನ್ಯ ತಲೆನೋವು ಸ್ವಲ್ಪ ಸಮಯದ ನಂತರ ನಿವಾರಣೆಯಾಗುತ್ತದೆ. ನೋವು ಹೆಚ್ಚಾಗುತ್ತಲೇ ಇದ್ದರೆ, ಔಷಧಿಗಳು ಪ್ರತಿಕ್ರಿಯಿಸದಿದ್ದರೆ ಅದು ಮೆದುಳಿನ ಗೆಡ್ಡೆಯಂತಹ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.
ಬೆಳಿಗ್ಗೆ ತೀವ್ರ ತಲೆನೋವು
ಕೆಲವೊಮ್ಮೆ ಬೆಳಗ್ಗೆ ಏಳುವಾಗಲೇ ತಲೆನೋವು ಶುರುವಾಗುತ್ತದೆ. ಆಗ ತೀವ್ರವೆನಿಸಿದರೂ ಕ್ರಮೇಣ ಕಡಿಮೆಯಾಗುತ್ತದೆ. ಸಾಮಾನ್ಯ ತಲೆನೋವು ದಿನವಿಡೀ ಇರುತ್ತದೆ. ಆದರೆ ಬೆಳಗ್ಗೆ ಇದ್ದಕ್ಕಿದ್ದಂತೆ ತಲೆನೋವು ಶುರುವಾಗುವುದು ಮತ್ತು ನಂತರ ಕ್ರಮೇಣ ಕಡಿಮೆಯಾಗುವುದು ಕಳವಳಕಾರಿ. ಇದು ಕೂಡ ಮೆದುಳಿನ ಗೆಡ್ಡೆಯಂತಹ ಗಂಭೀರ ಸಮಸ್ಯೆಯ ಸಂಕೇತವೂ ಆಗಿರಬಹುದು.
ದೃಷ್ಟಿಯಲ್ಲಿ ಬದಲಾವಣೆ
ತಲೆನೋವಿನ ಜೊತೆಗೆ ದೃಷ್ಟಿ ಮಸುಕಾಗುವುದು, ವಸ್ತುಗಳು ಎರಡೆರಡು ಕಾಣಿಸುವುದು ಅಥವಾ ಕಣ್ಣುಗಳಲ್ಲಿ ಒತ್ತಡವಿದ್ದರೆ ವೈದ್ಯರನ್ನು ಸಂಪರ್ಕಿಸಿ. ಇದು ಕೂಡ ಮೆದುಳಿನ ಗೆಡ್ಡೆಯಂತಹ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು.
ಆಗಾಗ್ಗೆ ವಾಕರಿಕೆ ಮತ್ತು ವಾಂತಿ
ತಲೆನೋವಿನ ಜೊತೆಗೆ ವಿನಾಕಾರಣ ಪದೇ ಪದೇ ವಾಂತಿಯಾಗುತ್ತಿದ್ದರೆ ಅದು ಸಹ ಆತಂಕಕಾರಿಯೇ. ಮೆದುಳಿನಲ್ಲಿ ಗಡ್ಡೆಯಾಗಿದ್ದರೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ವರ್ತನೆಯಲ್ಲಿ ಮಾರ್ಪಾಡು
ಕಿರಿಕಿರಿ, ವ್ಯಾಕುಲತೆ, ಅಥವಾ ನೆನಪಿನ ಶಕ್ತಿ ನಷ್ಟದಂತಹ ನಡವಳಿಕೆ ಬದಲಾವಣೆಗಳು ಕೂಡ ತಲೆನೋವಿನ ಜೊತೆಗೆ ಸಂಭವಿಸುತ್ತವೆ. ಈ ರೋಗಲಕ್ಷಣಗಳು ಮೆದುಳಿನ ಗಡ್ಡೆಯ ಚಿಹ್ನೆಗಳಾಗಿರಬಹುದು.
ಮೇಲೆ ತಿಳಿಸಲಾದ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಅಗತ್ಯವಿದ್ದರೆ ಮೆದುಳಿನ ಸ್ಕ್ಯಾನ್ ಅಥವಾ MRI ಪರೀಕ್ಷೆಯನ್ನು ವೈದ್ಯರು ಶಿಫಾರಸು ಮಾಡಬಹುದು. ಸಕಾಲಿಕ ರೋಗನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯಿಂದ ಮೆದುಳಿನ ಗಡ್ಡೆಯನ್ನು ಗುಣಪಡಿಸಬಹುದು.