ಆನೆಗಳಿಗೆ ಕಬ್ಬು ಅತಿ ಪ್ರಿಯವಾದ ಆಹಾರ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕೇರಳದ ಈ ಕಾಡಾನೆಗೆ ಮಾತ್ರ ಅದೇಕೋ ಪಡಿತರ ಅಕ್ಕಿ ಮೇಲೆ ಬಲು ಪ್ರೀತಿ ಇದ್ದಂತೆ ಕಾಣುತ್ತದೆ. ಹೀಗಾಗಿಯೇ ಕಳೆದ ಹತ್ತು ದಿನಗಳಲ್ಲಿ ಅವಧಿಯಲ್ಲಿ ಪಡಿತರ ಅಂಗಡಿಯೊಂದರ ಮೇಲೆ ನಾಲ್ಕನೇ ಬಾರಿ ದಾಳಿ ನಡೆಸಿದೆ.
ಇಂತಹದೊಂದು ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಗುಡ್ಡಗಾಡು ಪ್ರದೇಶವಾಗಿರುವ ಪನ್ನಿಯಾರ್ ಎಸ್ಟೇಟ್ ನಲ್ಲಿ ನಡೆದಿದ್ದು, ಆಂಟನಿ ಎಂಬುವರಿಗೆ ಸೇರಿದ ಪಡಿತರ ಅಂಗಡಿಯ ಮೇಲೆ ಕಾಡಾನೆ ಪದೇ ಪದೇ ದಾಳಿ ಮಾಡುತ್ತಿದೆ. ಅಲ್ಲದೆ ಅಕ್ಕಿಯ ಜೊತೆಗೆ ಸಕ್ಕರೆ, ಗೋಧಿಯ ಚೀಲವನ್ನು ಬೀಳಿಸಿ, ಇದು ತಿನ್ನುತ್ತದೆ ಎನ್ನಲಾಗಿದೆ.
ಈ ಆನೆಗೆ ಅಕ್ಕಿಯ ಮೇಲಿರುವ ಪ್ರೀತಿಯನ್ನು ಕಂಡು ಊರಿನ ಜನ ಅದಕ್ಕೆ ಅರಿಕೊಂಬನ್ ಅಂದರೆ ಅಕ್ಕಿ ಆನೆ ಎಂಬ ಹೆಸರಿಟ್ಟಿದ್ದು, ಇದನ್ನು ಸೆರೆ ಹಿಡಿಯುವವರೆಗೂ ನಮಗೆ ಈ ತೊಂದರೆ ತಪ್ಪಿದ್ದಲ್ಲ ಎನ್ನುತ್ತಿದ್ದಾರೆ. ಆದರೆ ಅರಣ್ಯಾಧಿಕಾರಿಗಳು ಒಂದೇ ಆನೆ ಈ ರೀತಿ ಮಾಡುತ್ತಿದೆ ಎಂಬುದು ಖಚಿತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.