ಹೈದರಾಬಾದ್: ಪೊಲೀಸ್ ಕಾನ್ಸ್ ಟೇಬಲ್ ಓರ್ವ ತನ್ನ ಅತ್ತೆಯನ್ನೇ ಗುಂಡುಟ್ಟು ಕೊಂದ ಘಟನೆ ಆಂಧ್ರಪ್ರದೇಶದ ಹನುಮಕೊಂಡ ಜಿಲ್ಲೆಯ ಗುಂಡ್ಲಸಿಂಗಾರ ಇಂದಿರಮ್ಮ ಕಾಲೋನಿಯಲ್ಲಿ ನಡೆದಿದೆ.
ಪ್ರಸಾದ್ ಅತ್ತೆಯನ್ನೇ ಕೊಂದ ಪೊಲೀಸ್ ಕಾನ್ಸ್ ಟೇಬಲ್. ರಾಮಗುಂಡ್ಲಂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ತೋಟಪಲ್ಲಿ ಠಾಣೆಯಲಿ ಕಾರ್ಯನಿರ್ವಹಿಸುತ್ತಿದ್ದ. ಪತಿ-ಪತ್ನಿ ನಡುವೆ ಜಗಳ ಹಾಗೂ ಹಣಕಾಸಿನ ವಿಚಾರವಾಗಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪ್ರಸಾದ್ ಗುಂಡ್ಲಸಿಂಗಾರಂ ಪ್ರದೇಶದ ರಮಾ ಎಂಬುವವರನ್ನು ವಿವಾಹವಾಗಿದ್ದ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ಜಗಳವಾಗಿದೆ. ಇದೇ ವಿಚಾರವಾಗಿ ಪತ್ನಿ, ಮಹಿಳಾ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಂತೆ.
ಇಂದು ಗುಂಡ್ಲಸಿಂಗಾರಂ ಪ್ರದೇಶದ ತನ್ನ ಅತ್ತೆಯ ಮನೆಗೆ ಬಂದ ಕಾನ್ಸ್ ಟೇಬಲ್ ಪ್ರಸಾದ್, ಹಣದ ವಿಚಾರವಾಗಿ ಕ್ಯಾತೆ ತೆಗೆದಿದ್ದಾನೆ. ತನ್ನ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದನಂತೆ. ಈ ವೇಳೆ ಅತ್ತೆ-ಅಳಿಯ ಪ್ರಸಾದ್ ನಡುವೆ ವಾಗ್ವಾದ ನಡೆದಿದೆ. ತನ್ನ ಬಳಿ ಇದ್ದ ಸರ್ವಿಸ್ ರಿವಾಲ್ವರ್ ನಿಂದ ಅತ್ತೆಯ ಮೇಲೆ 2 ಸುತ್ತು ಗುಂಡು ಹಾರಿಸಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದ ಅತ್ತೆ ಕೊನೆಯುಸಿರೆಳೆದಿದ್ದಾರೆ. ಇದನ್ನು ಗಮನಿಸಿದ ಅಕ್ಕ-ಪಕ್ಕದ ಮನೆಯವರು ಪ್ರಸಾದ್ ನನ್ನು ಹಿಡಿದು ಕಲ್ಲಿನಿಂದ ಹೊಡೆದಿದ್ದಾರೆ. ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯರಿಂದ ಥಳಿತಕ್ಕೊಳಗಾದ ಪ್ರಸಾದ್ ನನ್ನು ಸಧ್ಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸ್ಥಳೀಯರು ಹೇಳುವ ಪ್ರಕಾರ ಕಾನ್ಸ್ ಟೇಬಲ್ ಪ್ರಸಾದ್ ಕುಡಿತದ ದಾಸನಾಗಿದ್ದ. ಇದರಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ವಾಪಾಸ್ ಆಗಿ ತಾಯಿಯೊಂದಿಗೆ ವಾಸವಾಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.