ಕೊರೊನಾ ವೈರಸ್ ಇನ್ನೂ ಅಂತ್ಯವಾದಂತೆ ಕಾಣ್ತಿಲ್ಲ. ಒಂದಲ್ಲ ಒಂದು ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಸದ್ಯ ಕೋವಿಡ್‌ನ ಹೊಸ ರೂಪಾಂತರಿ ಫ್ಲೂಕ್ (FLuQE) ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಕರೋನಾಗೆ ಕಾರಣವಾದ SARS-CoV-2 ವೈರಸ್‌ನ ರೂಪಾಂತರವೇ ಫ್ಲೂಕ್.
ಆಸ್ಟ್ರೇಲಿಯಾದಲ್ಲಿ ಸೋಂಕಿಗೆ ಕಾರಣವಾಗುತ್ತಿರುವ ಫ್ಲೂಕ್ (ಕೆಪಿ.3) ಫ್ಲರ್ಟ್‌ನ ವಂಶಸ್ಥ ವೈರಸ್ ಎಂದು ಹೇಳಲಾಗುತ್ತಿದೆ. ಫ್ಲೂಕ್ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆದಿಲ್ಲ. ಆದರೆ ಇದು ನಮ್ಮ ಕೋಶಗಳಿಗೆ ಸೋಂಕು ತರಬಲ್ಲ ವೈರಸ್ ಎಂಬುದರಲ್ಲಿ ಸಂದೇಹವಿಲ್ಲ. ಈ ಕಾರಣಕ್ಕಾಗಿ ಅನೇಕ ದೇಶಗಳಲ್ಲಿ ಫ್ಲೂಕ್ ಪರಿಣಾಮಕಾರಿಯಾಗುತ್ತಿದೆ. ಫ್ಲೂಕ್ ಸೋಂಕು ಕೂಡ ಬಹಳ ವೇಗವಾಗಿ ಹರಡಬಲ್ಲದು.
ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಈ ವೈರಸ್‌ಗಳು ಸವಾಲಾಗಿ ಪರಿಣಮಿಸಿವೆ. ಲಸಿಕೆಗಳು ಕೂಡ ಈ ಸೋಂಕಿನಿಂದ ಸಮರ್ಪಕವಾಗಿ ರಕ್ಷಿಸುವುದಿಲ್ಲ ಅಥವಾ ವೈರಸ್ ಹರಡುವಿಕೆಯನ್ನು ನಿಗ್ರಹಿಸುವುದಿಲ್ಲ. ಮುಂದಿನ ಪೀಳಿಗೆಯ ಲಸಿಕೆಗಳು ಮತ್ತು ಚಿಕಿತ್ಸೆಗಳು, ಸೋಂಕು ಮತ್ತು ಪ್ರಸರಣವನ್ನು ಕಡಿಮೆ ಮಾಡಲು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದಲ್ಲಿ (ಮೂಗು ಮತ್ತು ಗಂಟಲು) ಪ್ರತಿರಕ್ಷೆಯನ್ನು ಹೆಚ್ಚಿಸುವ ಅಗತ್ಯವಿದೆ. ಏಕೆಂದರೆ ಇಲ್ಲಿಂದಲೇ ಸೋಂಕು ಪ್ರಾರಂಭವಾಗುತ್ತದೆ. ಈ ಉದ್ದೇಶಕ್ಕಾಗಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವ ಮೂಗಿನ ದ್ರವೌಷಧಗಳು ಮತ್ತು ಮೂಗಿನ ಲಸಿಕೆಗಳಿವೆ.