ಸಕ್ಕರೆಯ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ರೀಗ ಸದ್ಯದಲ್ಲೇ ಮಾರುಕಟ್ಟೆಗೆ ಹೊಸ ಸಕ್ಕರೆ ಬರಲಿದೆ. ಈ ಸಕ್ಕರೆ ಸೇವನೆ ಮಾಡಿದ್ರೆ ಕೊಲೆಸ್ಟ್ರಾಲ್ ಆಗಲಿ, ರಕ್ತದೊತ್ತಡವಾಗಲಿ ಹೆಚ್ಚಾಗುವುದಿಲ್ಲ. ಈ ಸಕ್ಕರೆ ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ. ಅಷ್ಟೇ ಅಲ್ಲ ಈ ಸಕ್ಕರೆಯ ನಿಯಮಿತ ಸೇವನೆಯಿಂದ ಫ್ಯಾಟಿ ಲಿವರ್ ಸಮಸ್ಯೆಯೂ ಕಡಿಮೆಯಾಗುತ್ತದೆ.
ನ್ಯಾಷನಲ್ ಶುಗರ್ ಇನ್‌ಸ್ಟಿಟ್ಯೂಟ್ ಹೊಸ ರೀತಿಯ ಸಕ್ಕರೆಯನ್ನು ಸಿದ್ಧಪಡಿಸಿದೆ. ಇದು ದೇಶದ ಮೊದಲ ಕಡಿಮೆ ಜಿಐ (ಗ್ಲೈಸೆಮಿಕ್ ಇಂಡೆಕ್ಸ್) ಸಕ್ಕರೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆರು ವರ್ಷಗಳ ಕಠಿಣ ಪರಿಶ್ರಮದ ನಂತರ ಈ ಸಕ್ಕರೆಯನ್ನು ಆವಿಷ್ಕರಿಸಲಾಗಿದೆ. ಅದರ ಪೇಟೆಂಟ್ ಅನ್ನು ಶೀಘ್ರದಲ್ಲೇ ಸಲ್ಲಿಸುವುದಾಗಿ ಕಂಪನಿಯ ನಿರ್ದೇಶಕರು ತಿಳಿಸಿದ್ದಾರೆ.
ಇದರ ಬೆಲೆ ಸಾಮಾನ್ಯ ಸಕ್ಕರೆಗಿಂತ ಶೇ.20ರಷ್ಟು ಹೆಚ್ಚಿರುತ್ತದೆ. ಅದರ ಪೇಟೆಂಟ್ ಪಡೆದ ನಂತರ ತಂತ್ರಜ್ಞಾನವನ್ನು ವಾಣಿಜ್ಯ ಬಳಕೆಗೆ ನೀಡಲಾಗುವುದು. ಈ ಸಕ್ಕರೆಯಲ್ಲಿ ಪ್ರತಿ ಗ್ರಾಂನಲ್ಲೂ ವಿಟಮಿನ್ ಎ 19 ಐಯು ಇದೆ, ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಶೀಘ್ರದಲ್ಲೇ ಮೆಗ್ನೀಸಿಯಮ್, ಕಬ್ಬಿಣ, ಸತು, ವಿಟಮಿನ್ ಬಿ 12 ಅನ್ನು ಅದರಲ್ಲಿ ಸೇರ್ಪಡೆ ಮಾಡಲಾಗುತ್ತದೆ.
ಸಾಮಾನ್ಯ ಸಕ್ಕರೆಯ GI ಮಟ್ಟವು ಸುಮಾರು 68ರಷ್ಟಿರುತ್ತದೆ. ಇದನ್ನು ತಿಂದ ನಂತರ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ನಂತರ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಬಿಡುಗಡೆಯಾಗುತ್ತದೆ ಮತ್ತು ಜಿಐ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಈ ಸಕ್ಕರೆಯ ಜಿಐ ಅನ್ನು 55ಕ್ಕಿಂತ ಕಡಿಮೆ ಮಾಡಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ಇದರಲ್ಲಿ ವಿಶೇಷ ವಿಧಾನದಿಂದ ಕಬ್ಬಿನ ರಸವನ್ನು ಶುದ್ಧೀಕರಿಸಲಾಗಿದೆ.