
ಮಂಗನ ಕಾಯಿಲೆಯ ಹೊಸ ರೂಪಾಂತರ ನಡುಕ ಹುಟ್ಟಿಸಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಕೂಡ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಈ ಹೊಸ ರೂಪಾಂತರವು ಕಳೆದ ವರ್ಷ ಹರಡಿದ ಮಂಗನ ಕಾಯಿಲೆಗಿಂತ ಹೆಚ್ಚು ಮಾರಕ ಎಂದು ಹೇಳಲಾಗುತ್ತದೆ. ಈ ವರ್ಷದ ಆರಂಭದಿಂದ ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 14 ಸಾವಿರಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 524 ಜನರು ಸಾವನ್ನಪ್ಪಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಮಹಿಳೆಯರು ಹೆಚ್ಚು ಅಪಾಯದಲ್ಲಿದ್ದಾರೆ. ಈ ರೋಗ ಇದುವರೆಗೆ ಆಫ್ರಿಕಾದ 13 ದೇಶಗಳಿಗೆ ಹರಡಿದೆ.
WHO ಪ್ರಕಾರ ಮಂಕಿಪಾಕ್ಸ್‌ನ ಹೊಸ ರೂಪಾಂತರ ಆಫ್ರಿಕಾದ ಹೊರಗೆ ಮತ್ತು ಇತರ ದೇಶಗಳಿಗೆ ಹರಡುವ ಸಾಧ್ಯತೆ ತುಂಬಾ ಹೆಚ್ಚಾಗಿದೆ. ಮಂಕಿಪಾಕ್ಸ್ ಸಾಂಕ್ರಾಮಿಕ ರೋಗವಾಗಿದ್ದು ಮೊದಲು 1970ರಲ್ಲಿ ಕಾಂಗೋ ರಿಪಬ್ಲಿಕ್‌ನಲ್ಲಿ ಕಾಣಿಸಿಕೊಂಡಿತ್ತು. ಈ ವೈರಸ್‌ನಲ್ಲಿ ಎರಡು ವಿಧಗಳಿವೆ – ಕ್ಲಾಡ್ I ಮತ್ತು ಕ್ಲಾಡ್ II.
ಕ್ಲಾಡ್ I ಮತ್ತು ಕ್ಲಾಡ್ II ನಡುವಿನ ವ್ಯತ್ಯಾಸ
ಕ್ಲಾಡ್ I ಹೆಚ್ಚು ಮಾರಣಾಂತಿಕವಾಗಿದೆ. ಮಧ್ಯ ಆಫ್ರಿಕಾದ ಕಾಂಗೋ ಜಲಾನಯನ ಪ್ರದೇಶದಲ್ಲಿ ದಶಕಗಳಿಂದಲೂ ಇದು ಹರಡುತ್ತಲೇ ಇದೆ. ತೀವ್ರತೆ ಕಡಿಮೆ ಇರುವ ಕ್ಲಾಡ್ II ಪಶ್ಚಿಮ ಆಫ್ರಿಕಾದ ಕೆಲವು ಭಾಗಗಳಲ್ಲಿ ಕಂಡುಬಂದಿದೆ. ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬಂದ ಜನರಲ್ಲಿ ಮಂಕಿಪಾಕ್ಸ್ ಕಾಣಿಸಿಕೊಳ್ಳುತ್ತದೆ. ಇದರ ಪ್ರಮುಖ ಲಕ್ಷಣಗಳೆಂದರೆ ಜ್ವರ, ಸ್ನಾಯು ನೋವು ಮತ್ತು ಚರ್ಮದ ಮೇಲೆ ಬೊಬ್ಬೆಗಳು.
ಕ್ಲಾಡ್ II ಹೊಸ ರೂಪಾಂತರ
ಮೇ 2022 ರಲ್ಲಿ ಕ್ಲಾಡ್ IIನ ಹೊಸ ರೂಪಾಂತರಿ ಪ್ರಪಂಚದಾದ್ಯಂತ ಹರಡಿತು. ಇದು ಹೆಚ್ಚಾಗಿ ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರ ಮೇಲೆ ಪರಿಣಾಮ ಬೀರುತ್ತದೆ. ಈಗ ಕ್ಲಾಡ್ I ನ ಹೊಸ ರೂಪಾಂತರಿ ಹರಡಿದ್ದು, ಇದು ಹೆಚ್ಚು ಮಾರಕವಾಗಿದೆ.
ಈ ಹೊಸ ರೂಪಾಂತರಿ ಮಕ್ಕಳಲ್ಲೂ ಹರಡುತ್ತಿದೆ. ಕ್ಲೇಡ್ Ib ಸುಮಾರು 3.6 ಪ್ರತಿಶತ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗುತ್ತದೆ. ಕ್ಲಾಡ್ II ಗಿಂತ ಹೆಚ್ಚು ತೀವ್ರವಾದ ರೋಗವನ್ನು ಉಂಟುಮಾಡುತ್ತದೆ. ಕಾಂಗೋದ ಬಹುತೇಕ ಎಲ್ಲಾ ಪ್ರಾಂತ್ಯಗಳು ಈಗ ಕ್ಲಾಡ್ I ಅಥವಾ ಕ್ಲಾಡ್ Ib ಕಪಿಮುಷ್ಠಿಯಲ್ಲಿವೆ,
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ಹೆಚ್ಚು. ಜನವರಿ 2022ರಿಂದ ಆಗಸ್ಟ್ 2024ರ ನಡುವೆ ಆಫ್ರಿಕಾದಲ್ಲಿ 38,465 ಮಂಕಿಪಾಕ್ಸ್ ಪ್ರಕರಣಗಳು ಮತ್ತು 1,456 ಸಾವುಗಳು ಸಂಭವಿಸಿವೆ. ಇತ್ತೀಚೆಗೆ ಬುರುಂಡಿ, ಕೀನ್ಯಾ, ರುವಾಂಡಾ ಮತ್ತು ಉಗಾಂಡಾದಲ್ಲೂ ಮಂಗನ ಕಾಯಿಲೆ ಪತ್ತೆಯಾಗಿದೆ. ಹಾಗಾಗಿ ಈ ಹೊಸ ರೂಪಾಂತರಿ ಪ್ರಪಂಚದಾದ್ಯಂತ ಆತಂಕ ಹುಟ್ಟಿಸಿದೆ.