ಭೋರ್ಗರೆವ ಮಳೆಯ ನಡುವೆ ಹಸಿರು ಬೆಟ್ಟಗಳು ಮಲೆನಾಡ ಸೊಬಗನ್ನು ದುಪ್ಪಟ್ಟು ಮಾಡಿವೆ. ಎತ್ತರದಿಂದ ಧುಮ್ಮಿಕ್ಕುವ ಜಲಪಾತ, ಸುತ್ತಮುತ್ತ ದಟ್ಟವಾದ ಕಾಡು, ಪ್ರಕೃತಿ ಪ್ರಿಯರಿಗೆ ಸ್ವರ್ಗ ಸುಖ ನೀಡುವ ಅನೇಕ ಪ್ರವಾಸಿ ಸ್ಥಳಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಅನೇಕ ಜಲಪಾತಗಳು ಪ್ರವಾಸಿಗರ ಮನಸೂರೆಗೊಳ್ಳುತ್ತವೆ. ಈ ಮೂರು ತಾಲೂಕುಗಳಲ್ಲಿಯೇ ಸಾಕಷ್ಟು ಫಾಲ್ಸ್ ಗಳಿದ್ದು, ಮಳೆಗಾಲದಲ್ಲಿ ಪ್ರಕೃತಿಯ ರಮಣೀಯ ನೋಟವನ್ನು ಪ್ರವಾಸಿಗರು, ಸಾಹಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.
ಸಿದ್ಧಾಪುರ ತಾಲೂಕಿನಲ್ಲಿರುವ ಜಲಪಾತಗಳಲ್ಲಿ ಉಂಚಳ್ಳಿ ಜಲಪಾತವೂ ಒಂದು. 381 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಅಘನಾಶಿನಿ ನದಿಯಿಂದ ಸೃಷ್ಟಿಯಾಗಿದೆ. ಇದಲ್ಲದೆ ಬುರುಡೆ ಜಲಪಾತ ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದೇ ತಾಲೂಕಿನಲ್ಲಿ ವಾಟೆಹಳ್ಳವಿದ್ದು, ಮಳೆಗಾಲದಲ್ಲಿ ಈ ಜಲಪಾತಗಳನ್ನು ನೋಡುವುದೇ ಒಂದು ಹಬ್ಬ.
ಇನ್ನು ಶಿರಸಿ ತಾಲೂಕಿನಲ್ಲಿ ಶಿವಗಂಗಾ ಫಾಲ್ಸ್ ಕೂಡಾ ಇದೆ. ಸಹ್ಯಾದ್ರಿ ಪರ್ವತದಲ್ಲಿ ಕಾಣುವ ಈ ಜಲಪಾತವು ಶಿರಸಿ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳ ಗಡಿ ಪ್ರದೇಶದಲ್ಲಿದೆ. 74 ಅಡಿ ಎತ್ತರದಿಂದ ಈ ಜಲಪಾತ ಧುಮುಕುತ್ತದೆ.
ಯಲ್ಲಾಪುರ ತಾಲೂಕಿನಲ್ಲಿಯೂ ಸಾಕಷ್ಟು ಜಲಪಾತಗಳಿವೆ. ಮಾಗೋಡು ಫಾಲ್ಸ್ ಯಲ್ಲಾಪುರ ಪಟ್ಟಣದಿಂದ 17 ಕಿ.ಮೀ ದೂರದಲ್ಲಿದೆ. ಇನ್ನೊಂದು ಜಲಪಾತವೆಂದ್ರೆ ಸಾತೋಡಿ ಫಾಲ್ಸ್. ಕಲ್ಲರಮರನೆ ಘಾಟ್ ನಲ್ಲಿ ಈ ಜಲಪಾತವಿದೆ. ಸುಮಾರು 50 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತದ ನೀರು ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಕೊಡಸಳ್ಳಿ ಜಲಾಶಯದ ಹಿನ್ನೀರಿನಲ್ಲಿ ಸಮಾಗಮಗೊಳ್ಳುತ್ತದೆ.
ಈ ಮೂರು ತಾಲೂಕುಗಳಲ್ಲಿ ಇನ್ನೂ ಅನೇಕ ಜಲಪಾತಗಳಿವೆ. ಆದ್ರೆ ಸರಿಯಾದ ರಸ್ತೆ, ಸೌಲಭ್ಯಗಳ ಕೊರತೆಯಿಂದಾಗಿ ಅವು ಎಲೆಮರೆಯ ಕಾಯಿಯಂತಾಗಿವೆ.