ತುಮಕೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಆದೇಶ ವಾಪಾಸ್ ಪಡೆಯಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದನ್ನು ಬಿಜೆಪಿ ಖಂಡಿಸುತ್ತದೆ. ಸರ್ಕಾರದ ನಿರ್ಧಾರ ನ್ಯಾಯಾಲಯಕ್ಕೆ ಸವಾಲು ಹಾಕಿದಂತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ, ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಎಂ ಸಿದ್ದರಾಮಯ್ಯ ಆಕ್ಟ್, ಸೆಕ್ಷನ್ ಗಳ ಬಗ್ಗೆ ಮಾತನಾಡುತ್ತಾರೆ. ಅಂದು ಸಿಬಿಐನವರು ತನಿಖೆಗೆ ಅನುಮತಿ ಕೇಳಿದ್ದರು. ಸರ್ಕಾರ ಅನುಮತಿ ನೀಡಿತ್ತು. ರಾಜ್ಯದ ಡಿಸಿಎಂ ಕೋರ್ಟ್ ಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ ಎಂದರು.
ನ್ಯಾಯಾಲಯದ ಮುಂದೆಯೇ ಕ್ಲೀನ್ ಚಿಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲು ಹಾಕಿದಂತಿದೆ. ಸಿಬಿಐಗೆ ಸವಾಲಲ್ಲ ಇದು ನ್ಯಾಯಾಲಯಕ್ಕೆ ಸವಾಲ್ ಆಗಿದೆ. ಇಂತಹ ಪ್ರಕರಣಗಳನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುವುದು ಸೂಕ್ತವಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸುತ್ತೇವೆ ಎಂದು ಹೇಳಿದರು.