ಬೆಂಗಳೂರು: ಮನೆ ಬಾಡಿಗೆಗೆ ಇದ್ದ ಮಹಿಳೆಯೊಬ್ಬಳು ವೃದ್ಧೆಯನ್ನು ಭೀಕರವಾಗಿ ಹತ್ಯೆಗೈದು ಮೃತದೇಹವನ್ನು ಬೀರುವಿನಲ್ಲಿ ಸುತ್ತಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯ ನೆರಳೂರು ಬಳಿ ನಡೆದಿದೆ.
80 ವರ್ಷದ ಪಾರ್ವತಮ್ಮ ಹತ್ಯೆಯಾದ ವೃದ್ಧೆ. ಪಾರ್ವತಮ್ಮ ಮೂರನೇ ಮಹಡಿಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದರು. ಆದರೆ ಕಳೆದ ಎರಡು ದಿನಗಳಿಂದ ಏಕಾಏಕಿ ನಾಪತ್ತೆಯಾಗಿದ್ದ ಪಾರ್ವತಮ್ಮ ಅವರಿಗಾಗಿ ಕುಟುಂಬದವರು ಹುಡುಕಾಡುತ್ತಿದ್ದರು. ಆದರೂ ಸುಳಿವಿರಲಿಲ್ಲ. ಈಗ ವೃದ್ಧೆಯ ಶವ ಅದೇ ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಲ್ಲಿರುವ ಮನೆಯ ಬೀರುವಿನಲ್ಲಿ ಪತ್ತೆಯಾಗಿದೆ.
ನಾಲ್ಕನೇ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಾಯಲ್ ಖಾನ್ ಎಂಬ ಮಹಿಳೆ ವೃದ್ಧೆಯನ್ನು ಹತ್ಯೆ ಮಾಡಿ ಶವವನ್ನು ಕವರ್ ನಲ್ಲಿ ಸುತ್ತಿ ಬೀರುವಿನಲ್ಲಿಟ್ಟು ಪರಾರಿಯಾಗಿದ್ದಾಳೆ ಎಂದು ವೃದ್ಧೆ ಕುಟುಂಬದವರು ಆರೋಪಿಸಿದ್ದಾರೆ. ಯಾವ ಕಾರಣಕ್ಕಾಗಿ ವೃದ್ಧೆಯನ್ನು ಹತ್ಯೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.