ನಿತ್ಯ ಬಾಳೆಹಣ್ಣನ್ನು ಸೇವಿಸುವುದರಿಂದ ಉಷ್ಣ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು ಹಾಗೂ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು ಎಂಬುದು ನಿಮಗೆ ತಿಳಿದಿರುವ ಸಂಗತಿ. ಆದರೆ ಸೌಂದರ್ಯವರ್ಧಕವಾಗಿಯೂ ಬಾಳೆಹಣ್ಣು ಬಳಕೆಯಾಗುತ್ತದೆ ಎಂಬುದು ಹೊಸ ವಿಷಯ.
ವಯಸ್ಸಾಗುವಿಕೆಯ ಲಕ್ಷಣಗಳನ್ನು ಹೊಡೆದೋಡಿಸಲು ಬಾಳೆಹಣ್ಣು ಹೆಚ್ಚು ಸಹಕರಿಸುತ್ತದೆ. ಹಣ್ಣಾಗಿ ಕಪ್ಪಾಗುವ ಹಂತದಲ್ಲಿರುವ ಬಾಳೆಹಣ್ಣಿನ ಪೇಸ್ಟ್ ತಯಾರಿಸಿ ಅದಕ್ಕೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ.
ಅರ್ಧ ಗಂಟೆ ಬಳಿಕ ತಣ್ಣಗಿನ ನೀರಿನಲ್ಲಿ ಮುಖ ತೊಳೆದರೆ ಮುಖದ ಮೇಲಿನ ಸುಕ್ಕು ಹಾಗೂ ಗೆರೆಗಳು ದೂರವಾಗುತ್ತವೆ. ಅಲ್ಲದೆ ಮುಖಕ್ಕೆ ಹೊಳಪನ್ನೂ ನೀಡುತ್ತದೆ.
ಕಣ್ಣುಗಳ ಸೌಂದರ್ಯ ಕಾಪಾಡುವ ಗುಟ್ಟೂ ಬಾಳೆಹಣ್ಣಿಗಿದೆ. ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ಅನ್ನು ಫ್ರಿಜ್ ನಲ್ಲಿಡಿ. ಅರ್ಧ ಗಂಟೆ ಬಳಿಕ ಕಣ್ಣಿನ ಸುತ್ತ ಮಾಸ್ಕ್ ರೀತಿಯಲ್ಲಿ ಹಚ್ಚಿಕೊಳ್ಳಿ. ಸುಸ್ತಾದ ಕಣ್ಣುಗಳಿಗೆ ಆರಾಮದಾಯಕವೆನಿಸುವ ಈ ಫೇಸ್ ಪ್ಯಾಕ್ ಕಪ್ಪು ವರ್ತುಲವನ್ನೂ ದೂರ ಮಾಡುತ್ತದೆ.
ಬಾಳೆಹಣ್ಣಿನ ಪೇಸ್ಟ್ ಗೆ ಜೇನುತುಪ್ಪ ಬೆರೆಸಿ ಹೇರ್ ಮಾಸ್ಕ್ ಮಾಡಿಕೊಂಡು 20 ನಿಮಿಷ ಕ್ಯಾಪ್ ಹಾಕಿಕೊಳ್ಳಿ. ಬಳಿಕ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಕೂದಲು ತೊಳೆಯಿರಿ. ಇದರಿಂದ ಕೂದಲು ಕಪ್ಪಗಾಗುವುದು ಮಾತ್ರವಲ್ಲ, ಹೊಳಪು ಪಡೆದುಕೊಳ್ಳುತ್ತದೆ.