2007 ರಲ್ಲಿ ಅನಿತಾ ರಾಘವನ್ ಎಂಬುವವರು ಈಗಾಗಲೇ ಡೌನ್ ಸಿಂಡ್ರೋಮ್ ಹೊಂದಿದ್ದ ಎರಡು ಶಿಶುಗಳಿಗೆ ಜನ್ಮ ನೀಡಿದ್ದರು. ಆ ಎರಡೂ ಮಕ್ಕಳು ಜನಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದವು. ಮೂರನೇ ಬಾರಿ ಯಾವುದೇ ತೊಂದರೆಗಳಿಲ್ಲದೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದೆಂದು ಖಚಿತಪಡಿಸಿಕೊಳ್ಳಲು ಮಲಪ್ಪುರಂನ ಎಡಪ್ಪಲ್‌ನಲ್ಲಿರುವ ಎಡಪ್ಪಲ್ ಆಸ್ಪತ್ರೆಗಳ CIMAR ಜೆನೆಟಿಕ್ಸ್ ನಲ್ಲಿ ಆಗ ಫೆಟೊ ಮೆಟರ್ನಲ್ ಮೆಡಿಸಿನ್‌ನಲ್ಲಿ ಸಲಹೆಗಾರರಾಗಿದ್ದ ಡಾ. ಮುಕುಂದನ್ ಜಿ ಮೆನನ್ ಅವರನ್ನು ಸಂಪರ್ಕಿಸಿದ್ದರು. ಮೂರನೇ ಗರ್ಭಧಾರಣೆಯು ಆರೋಗ್ಯಕರ ಮಗುವಿಗೆ ಜನ್ಮ ನೀಡುವ ಕೊನೆಯ ಅವಕಾಶ ಎಂದು ಮಹಿಳೆ ನಂಬಿದ್ದರು ಎಂಬುದು ನ್ಯಾಯಾಲಯದ ಆದೇಶದ ಪ್ರಕಾರ ಗೊತ್ತಾಗಿದೆ.
ಗರ್ಭಾವಸ್ಥೆಯ ಹತ್ತನೇ, ಹದಿನಾರನೇ ಮತ್ತು ಇಪ್ಪತ್ತೊಂದನೇ ವಾರಗಳಲ್ಲಿ ಮಹಿಳೆ ಸ್ಕ್ಯಾನ್‌ಗೆ ಒಳಗಾದಾಗ ಯಾವುದೇ ಅಸಹಜತೆಯ ವರದಿ ಇರಲಿಲ್ಲ.
ದುರದೃಷ್ಟವಶಾತ್ 13 ಏಪ್ರಿಲ್ 2007 ರಂದು ಮಗು ಜನಿಸಿದಾಗ ಮಹಿಳೆಗೆ ಆಘಾತವಾಗಿತ್ತು. ವಿರೂಪದ ಕೈಕಾಲುಗಳನ್ನು ಹೊಂದಿದ್ದ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದಳು. ಈ ವೇಳೆ ವೈದ್ಯರನ್ನು ಪ್ರಶ್ನಿಸಿದಾಗ ವರದಿಗಳ ಪ್ರಕಾರ ಆಸ್ಪತ್ರೆಯ ಅಧಿಕಾರಿಗಳ ಉತ್ತರ ತೃಪ್ತಿಕರವಾಗಿರಲಿಲ್ಲ.
ವೈದ್ಯರ ಸಂಪೂರ್ಣ ನಿರ್ಲಕ್ಷ್ಯ ಮತ್ತು ಸೇವೆಯಲ್ಲಿನ ಕೊರತೆಯಿಂದಾಗಿ ಅನಿತಾ ಅವರ ಆರೋಗ್ಯಕರ ಮಗುವನ್ನು ಹೊಂದುವ ಅಂತಿಮ ಭರವಸೆಯು ಮುರಿದುಹೋಯಿತು. ಮಗು ಒಂದು ವರ್ಷ ಬದುಕಿದ್ದರೆ ಆರ್ಥಿಕ ಪರಿಹಾರ ನೀಡುವುದಾಗಿ ಆಸ್ಪತ್ರೆ ಭರವಸೆ ನೀಡಿತ್ತು, ಆದರೆ ಅವರು ಈ ಭರವಸೆಯನ್ನೂ ಈಡೇರಿಸಲು ವಿಫಲರಾಗಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಬದುಕುಳಿದ ಮಗುವಿಗೆ ಸದಾ ಕಾಲ ಕಾಳಜಿ ತೋರಬೇಕಾಗಿದ್ದರಿಂತ ಅನಿತಾ ಕೆಲಸ ಹುಡುಕುವುದು ಕಷ್ಟವಾಗಿ ಅಕೆಯ ಬದುಕು ಸಂಕಷ್ಟಕ್ಕೆ ಸಿಲುಕಿತು.
ವೈದ್ಯರು ತನ್ನ ಗರ್ಭಾವಸ್ಥೆಯಲ್ಲಿ ಮಗುವಿನ ಬಗ್ಗೆ ಸರಿಯಾದ ಮಾಹಿತಿ ನೀಡಿ ಸರಿಯಾದ ಕಾಳಜಿ ಮತ್ತು ಶ್ರದ್ಧೆಯಿಂದ ನಿರ್ವಹಿಸಿದ್ದರೆ ತನ್ನ ಮತ್ತು ತನ್ನ ಮಗುವಿನ ಸಂಕಟವನ್ನು ತಪ್ಪಿಸಬಹುದೆಂದು ಅನಿತಾ ನಂಬಿದ್ದರು. ಭ್ರೂಣದ ವಿರೂಪತೆಯನ್ನು ಮೊದಲೇ ಪತ್ತೆ ಮಾಡಿದ್ದರೆ, ಗರ್ಭಪಾತ ಮಾಡಿಸಿಕೊಳ್ಳಬಹುದಿತ್ತು. ಆದರೆ ಇದೀಗ ಸಮಯ ಕೈಮೀರಿದ್ದು ಸಮಸ್ಯೆಯನ್ನು ಚರ್ಚಿಸಲು 5 ಮೇ 2008 ರಂದು ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಲೇ ಇಲ್ಲವೆಂದ ಅನಿತಾ ಅಂತಿಮವಾಗಿ 2009 ರಲ್ಲಿ ಆಸ್ಪತ್ರೆಯ ವಿರುದ್ಧ ಗ್ರಾಹಕ ಆಯೋಗದಲ್ಲಿ ಪ್ರಕರಣವನ್ನು ದಾಖಲಿಸಿದರು.
ಆದರೆ ಆಸ್ಪತ್ರೆ ಮತ್ತು ಡಾ ಮುಕುಂದನ್ ಜಿ ಮೆನನ್ ಪ್ರಕಾರ 24 ನವೆಂಬರ್ 2006 ರಂದು ಮಹಿಳೆ ಭೇಟಿಯ ವೇಳೆ ಭ್ರೂಣದ ಬಯೋಮೆಟ್ರಿ ಸ್ಕ್ಯಾನ್ ಮಾಡಿತ್ತು. 6 ಮೇ 2007 ರ ನಿರೀಕ್ಷಿತ ಹೆರಿಗೆ ದಿನಾಂಕದೊಂದಿಗೆ ಮಾಡಿದ ಅಲ್ಟ್ರಾಸೌಂಡ್ ಸ್ಕ್ಯಾನ್ ಸಾಮಾನ್ಯ ಭ್ರೂಣದ ಬೆಳವಣಿಗೆಯನ್ನು ಸೂಚಿಸುತ್ತದೆ. ಆದರೆ ಭ್ರೂಣದ ಅಸಹಜತೆಗಳನ್ನು ಪತ್ತೆಹಚ್ಚಲು ಗರ್ಭಾವಸ್ಥೆಯ 18 ರಿಂದ 22 ವಾರಗಳ ನಡುವಿನ ಅನಾಮಲಿ ಸ್ಕ್ಯಾನ್ ಅಗತ್ಯವೆಂದು ತಿಳಿಸಲಾಗಿತ್ತು. ಆದರೆ ದೂರುದಾರರು ಈ ಸ್ಕ್ಯಾನ್ ಮಾಡಿಸಿಕೊಳ್ಳಲು ಬರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.