ದಡಾರ ಬಗ್ಗೆ ತಾತ್ಸಾರ ಮಾಡುವಂತಿಲ್ಲ. ಏಕೆ ಗೊತ್ತೇ? ಅದು ಏಕಾಏಕಿ ಲಕ್ಷಾಂತರ ಜೀವಗಳನ್ನು ಅಪಾಯಕ್ಕೆ ತೆಗೆದುಕೊಳ್ಳುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಒಂದು ದಡಾರ ಪ್ರಕರಣವು 12ರಿಂದ 18 ಮಂದಿಗೆ ಹರಡಬಹುದಾಗಿದೆ.
ಇತ್ತೀಚಿನ ಬಿಡುಗಡೆ ವರದಿ ಪ್ರಕಾರ 2021 ರಲ್ಲಿ ವಿಶ್ವಾದ್ಯಂತ ದಡಾರದಿಂದ ಅಂದಾಜು 9 ಮಿಲಿಯನ್ ಪ್ರಕರಣಗಳು ಕಂಡುಬಂದಿದ್ದು 1,28,000 ಸಾವು ಸಂಭವಿಸಿವೆ.
2021 ರಲ್ಲಿ ಪ್ರಪಂಚದಾದ್ಯಂತದ ಸಾಕಷ್ಟು ದೇಶಗಳು ಸಮಸ್ಯೆ ಎದುರಿಸಿದವು. 22 ದೇಶದಲ್ಲಿ ಹೆಚ್ಚು ಸಮಸ್ಯೆ ಕಾಣಿಸಿದೆ. ‘ವ್ಯಾಕ್ಸಿನೇಷನ್ ಕೊರತೆ’ ಮತ್ತು ದುರ್ಬಲ ಕಣ್ಗಾವಲು ಇಂತಹ ಏಕಾಏಕಿ ಸಮಸ್ಯೆ ಉಲ್ಬಣಕ್ಕೆ ಮೂಲ ಕಾರಣ ಎಂದು ಯುಎನ್ ಆರೋಗ್ಯ ಸಂಸ್ಥೆಯು ಗುರುತಿಸಿದೆ.
2021 ರಲ್ಲಿ ಸುಮಾರು 40 ಮಿಲಿಯನ್ ಮಕ್ಕಳು ದಡಾರ ಲಸಿಕೆ ಡೋಸ್ ಅನ್ನು ಪಡೆದಿಲ್ಲ, 25 ಮಿಲಿಯನ್ ಮಕ್ಕಳು ತಮ್ಮ ಮೊದಲ ಡೋಸ್ ಮತ್ತು 14.7 ಮಿಲಿಯನ್ ಮಕ್ಕಳು ತಮ್ಮ ಎರಡನೇ ಡೋಸ್ ಅನ್ನು ತಪ್ಪಿಸಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಸಾಂಕ್ರಾಮಿಕದ ವಿರೋಧಾಭಾಸವೆಂದರೆ ಕೋವಿಡ್ ವಿರುದ್ಧದ ಲಸಿಕೆಯನ್ನು ದಾಖಲೆಯ ಸಮಯದಲ್ಲಿ ಅಭಿವೃದ್ಧಿಪಡಿಸಿ, ಇತಿಹಾಸದಲ್ಲಿ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ನಡೆಸಿ ಯಶಸ್ವಿಯಾಯಿತು. ಇದೇ ವೇಳೆ ಮಕ್ಕಳು ವಾಡಿಕೆಯ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಜೀವ ಉಳಿಸುವ ಲಸಿಕೆಗಳನ್ನು ತಪ್ಪಿಸಿಕೊಂಡರು.