ಛಲ ಮತ್ತು ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋ ಮಾತಿದೆ. ಇದಕ್ಕೆ ಜೀವಂತ ನಿದರ್ಶನವೆಂದರೆ ಸಬ್ಯಸಾಚಿ ಮುಖರ್ಜಿ. ಪ್ರಸಿದ್ಧ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿಯವರ ಆರಂಭಿಕ ಜೀವನವು ಸುಲಭವಾಗಿರಲಿಲ್ಲ. ಆದರೆ ಎಲ್ಲವನ್ನೂ ಎದುರಿಸಿ ಸಾಧನೆಯ ಶಿಖರ ಏರಿದ್ದಾರೆ.
ಈಗ ಸಬ್ಯಸಾಚಿ ಲೆಹಂಗಾ ಮತ್ತು ಸೀರೆ ಎಂದರೆ ಸೆಲೆಬ್ರಿಟಿಗಳಿಂದ ಹಿಡಿದು ಪ್ರತಿಯೊಬ್ಬರೂ ಆಸೆಪಡುವಷ್ಟು ಜನಪ್ರಿಯವಾಗಿದೆ ಈ ಬ್ರಾಂಡ್. ಮದುವೆಯಲ್ಲಿ ಸಬ್ಯಸಾಚಿ ವಿನ್ಯಾಸಗೊಳಿಸಿದ ಉಡುಪು ಧರಿಸಬೇಕೆಂದು ವಧು ಕನಸು ಕಾಣುತ್ತಾಳೆ.
ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ವಿವಾಹದ ಉಡುಪನ್ನು ಸಬ್ಯಸಾಚಿ ವಿನ್ಯಾಸಗೊಳಿಸಿದ್ದರು. ಫ್ಯಾಷನ್ ಲೋಕದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಸಬ್ಯಸಾಚಿ ಅವರ ಬದುಕು ಇತರರಿಗೆ ಪ್ರೇರಣೆಯಾಗುವಂತಿದೆ.
16ನೇ ವಯಸ್ಸಿನಲ್ಲಿ ಮನೆ ಬಿಟ್ಟಿದ್ದರು ಸಬ್ಯಸಾಚಿ!
ಸಬ್ಯಸಾಚಿ 15 ವರ್ಷದವರಿದ್ದಾಗ ಅವರ ತಂದೆ ಕೆಲಸ ಕಳೆದುಕೊಂಡರು. ಆ ಅವಧಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿತ್ತು. ಮಗ ವಿದ್ಯಾಭ್ಯಾಸ ಮುಗಿಸಿ ಇಂಜಿನಿಯರ್ ಆಗಬೇಕೆನ್ನುವುದು ಅವರ ತಂದೆಯ ಆಸೆ, ಆದರೆ ಫ್ಯಾಶನ್ ಡಿಸೈನರ್ ಆಗಬೇಕೆಂಬುದು ಸಬ್ಯಸಾಚಿ ಕನಸಾಗಿತ್ತು. ಇದೇ ವಿಚಾರಕ್ಕೆ ತಂದೆ-ಮಗನ ಮಧ್ಯೆ ಸಾಕಷ್ಟು ಜಗಳಗಳಾಗಿದ್ದವು. ಈ ವಿಷಯ ಎಷ್ಟು ಗಂಭೀರವಾಯಿತೆಂದರೆ ಓದಿಗೆ ಹಣ ಕೊಡಲು ತಂದೆ ನಿರಾಕರಿಸಿದರು. ಬಳಿಕ ಸಬ್ಯಸಾಚಿ 16 ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದರು.
ಮನೆಯಿಂದ ಓಡಿಹೋದ ಸಬ್ಯಸಾಚಿ ಗೋವಾದಲ್ಲಿ ಬದುಕು ಕಟ್ಟಿಕೊಂಡರು. ಆರಂಭದಲ್ಲಿ ಹಣದ ಕೊರತೆಯಿಂದ ಹೋಟೆಲ್‌ನಲ್ಲಿ ಸರ್ವರ್ ಮಾಡುತ್ತಿದ್ದರು. ಆ ಸಂಬಳದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಲ್ಲಿ ಪದವಿ ಪಡೆದರು. 1999 ರಲ್ಲಿ ಕೋಲ್ಕತ್ತಾದ NIFT ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.
ಪದವಿ ಬಳಿಕ ಜೇಬಿನಲ್ಲಿ ಹಣವಿಲ್ಲದಿದ್ದರೂ ತಮ್ಮದೇ ಆದ ಬ್ರಾಂಡ್ ಪ್ರಾರಂಭಿಸಲು ಸಬ್ಯಸಾಚಿ ನಿರ್ಧರಿಸಿದರು. 6 ತಿಂಗಳ ನಂತರ ಮನೆಯವರಿಂದಲೇ 20,000 ರೂಪಾಯಿ ಸಾಲ ಪಡೆದು ಸಬ್ಯಸಾಚಿ ಬ್ರಾಂಡ್ ಅನ್ನು ಪ್ರಾರಂಭಿಸಿದರು. 2005 ರಲ್ಲಿ ಬ್ಲ್ಯಾಕ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಈವರೆಗೆ ಹಲವು ಚಿತ್ರಗಳಿಗೆ ಸಬ್ಯಸಾಚಿ ಡ್ರೆಸ್ ಡಿಸೈನ್ ಮಾಡಿದ್ದಾರೆ.
ಸಬ್ಯಸಾಚಿ ಸಾಕಷ್ಟು ವಿವಾದಗಳೊಂದಿಗೆ ಥಳುಕು ಹಾಕಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಮಾಡೆಲ್‌ಗಳನ್ನು ಕಡಿಮೆ ಬಟ್ಟೆಯಲ್ಲಿ ತೋರಿಸಿದ್ದು ವಿವಾದಕ್ಕೀಡಾಗಿತ್ತು. ಅದೇನೇ ಆದರೂ ಸದ್ಯ ಸಬ್ಯಸಾಚಿ ಅತ್ಯಂತ ಜನಪ್ರಿಯ ಮತ್ತು ಬಿಗ್ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಸಬ್ಯಸಾಚಿ ಅವರ ಆಸ್ತಿ ಕೂಡ ಕೋಟಿಗಳ ಲೆಕ್ಕದಲ್ಲಿದೆ.