ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ತೆಲುಗು ನಟಿಗೆ ಯುವಕನೊಬ್ಬ ಕಿರುಕುಳ ನೀಡಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಘಟನೆ ಬುಧವಾರ ಸಂಜೆ ಹೈದರಾಬಾದಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ಬಳಿಯ ಕೆ ಬಿ ಆರ್ ಪಾರ್ಕ್ ನಲ್ಲಿ ನಡೆದಿದೆ.
ಈ ನಟಿ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಎಂದಿನಂತೆ ಪಾರ್ಕಿನಲ್ಲಿ ಏಕಾಂಗಿಯಾಗಿ ವಾಕ್ ಮಾಡುವ ವೇಳೆ ಯುವಕ ಹಿಂಬಾಲಿಸಲು ಆರಂಭಿಸಿದ್ದಾನೆ. ಈ ಹಿಂದೆಯೂ ಕೂಡ ಇಂಥದ್ದೇ ಕೃತ್ಯ ಮಾಡಿದ್ದ ಆತ ಅಶ್ಲೀಲ ಮಾತುಗಳನ್ನಾಡಿದ್ದ ಎನ್ನಲಾಗಿದೆ.
ಆತ ತನ್ನನ್ನು ಹಿಂಬಾಲಿಸುತ್ತಿರುವುದು ಹಾಗೂ ಅಸಹ್ಯಕರ ಕಮೆಂಟ್ ಮಾಡುತ್ತಿರುವುದನ್ನು ಗಮನಿಸಿದ ನಟಿ, ಕೂಡಲೇ ವಾಕ್ ಮಾಡುತ್ತಿದ್ದ ಇತರರಿಗೆ ವಿಷಯ ಹೇಳಿದ್ದಾರೆ. ಅವರುಗಳು ಪಾರ್ಕ್ ಸಿಬ್ಬಂದಿಯ ಗಮನಕ್ಕೆ ತಂದಿದ್ದು, ಯುವಕನನ್ನು ಹಿಡಿದು ಬಂಜಾರ ಹಿಲ್ಸ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.