ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದ್ದು, ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ತಾವು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದಿರುವುದು ದೇಶದ ಪ್ರಜಾಪ್ರಭುತ್ವದ ಬಲವನ್ನು ಎತ್ತಿ ತೋರುತ್ತದೆ ಎಂದಿದ್ದಾರೆ.
ವಿಶ್ವ ಸಂಸ್ಥೆಯ 76ನೇ ಮಹಾಧಿವೇಶದಲ್ಲಿ ಮಾತನಾಡಿದ ಮೋದಿ, “ಸಾವಿರಾರು ವರ್ಷಗಳಷ್ಟು ಹಳೆಯ ಪ್ರಜಾಪ್ರಭುತ್ವದ ಸಂಪ್ರದಾಯ ನಮ್ಮದು,” ಎಂದಿದ್ದಾರೆ.
“ನಾನು ಪ್ರತಿನಿಧಿಸುವ ದೇಶವು ಪ್ರಜಾಪ್ರಭುತ್ವದ ತಾಯಿಯಾಗಿದೆ. ಈ ವರ್ಷದ 15ನೇ ಆಗಸ್ಟ್‌ನಲ್ಲಿ ಭಾರತವು ತನ್ನ ಸ್ವಾತಂತ್ರ‍್ಯದ 75ನೇ ವರ್ಷಕ್ಕೆ ಕಾಲಿಟ್ಟಿದೆ. ನಮ್ಮ ಪ್ರಬಲ ಪ್ರಜಾಪ್ರಭುತ್ವದ ಗುರುತು ನಮ್ಮ ವೈವಿಧ್ಯತೆಯಾಗಿದೆ. ಡಜ಼ನ್‌ಗಟ್ಟಲೇ ಭಾಷೆಗಳಿರುವ ದೇಶವಾದ ಭಾರತದಲ್ಲಿ ನೂರಾರು ಉಪಭಾಷೆಗಳಿದ್ದು, ವಿವಿಧ ಜೀವಶೈಲಿಗಳು, ಹಾಗೂ ಆಹಾರ ಶೈಲಿಗಳಿವೆ. ಇದು ವೈವಿಧ್ಯಮಯ ಪ್ರಜಾಪ್ರಭುತ್ವದ ಉದಾಹರಣೆಯಾಗಿದೆ,” ಎಂದು ಮೋದಿ ತಿಳಿಸಿದ್ದಾರೆ.
“ರೈಲ್ವೇ ನಿಲ್ದಾಣದಲ್ಲಿ ತನ್ನ ತಂದೆಗೆ ಚಹಾ ಮಾರಲು ನೆರವಾಗುತ್ತಿದ್ದ ಪುಟ್ಟ ಬಾಲಕನೊಬ್ಬ ಇಂದು ವಿಶ್ವ ಸಂಸ್ಥೆಯ ಮಹಾಧಿವೇಶನದಲ್ಲಿ ಭಾರತದ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಉದ್ದೇಶಿಸಿ ಮಾತನಾಡುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಬಲಕ್ಕೊಂದು ನಿದರ್ಶನವಾಗಿದೆ,’’ ಎಂದು ಮೋದಿ ತಿಳಿಸಿದ್ದಾರೆ.
“ಸರ್ಕಾರದ ಮುಖ್ಯಸ್ಥರಾಗಿ 20 ವರ್ಷಗಳ ಕಾಲ ನನ್ನ ದೇಶವಾಸಿಗಳ ಸೇವೆ ಮಾಡುತ್ತಿದ್ದೇನೆ. ಮೊದಲಿಗೆ, ಗುಜರಾತ್‌ನ ಅತ್ಯಂತ ಸುದೀರ್ಘಾವಧಿಯ ಮುಖ್ಯಮಂತ್ರಿಯಾಗಿ, ಕಳೆದ ಏಳು ವರ್ಷಗಳಿಂದ ದೇಶದ ಪ್ರಧಾನಿಯಾಗಿ,” ಎಂದು ಮೋದಿ ತಿಳಿಸಿದ್ದಾರೆ.