ಮನೆಯಲ್ಲಿ ಹಿರಿಯರ ಮಾತು, ನಡವಳಿಕೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮಕ್ಕಳು ಮನೆಯ ಹಿರಿಯರನ್ನು ಅನುಸರಿಸುತ್ತಾರೆ. ಹಾಗಾಗಿ ಮನೆಯಲ್ಲಿ ಎಲ್ಲರೆದುರು ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಬೇಕು. ಆಚಾರ್ಯ ಚಾಣಕ್ಯ ಕೂಡ ಈ ಕುರಿತು ಹೇಳಿದ್ದಾರೆ. ಅವರ ನೀತಿಗಳನ್ನು ಅನುಸರಿಸಿದರೆ ಜೀವನದಲ್ಲಿ ಸಫಲತೆ ಸಿಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಪತ್ನಿ, ಮಕ್ಕಳ ಮುಂದೆ ಕೆಲ ಕೆಲಸ ಮಾಡಬಾರದು ಎಂದು ಚಾಣಕ್ಯ ಹೇಳಿದ್ದಾರೆ.
ಬಾಯಿಂದ ಹೊರಟ ಮಾತನ್ನು ಮತ್ತು ಬಿಲ್ಲಿನಿಂದ ಹೊರಟ ಬಾಣವನ್ನು ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ಹೆಂಡತಿ ಮತ್ತು ಮಕ್ಕಳ ಮುಂದೆ ಮರ್ಯಾದೆ ಹಾಳು ಮಾಡುವ ಶಬ್ದಗಳನ್ನು ಆಡಬಾರದು. ಇದು ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ತಂದೆ – ತಾಯಿಗಳು ಮಕ್ಕಳಿಗೆ ಸತ್ಯ ಹೇಳುವಂತೆ ಹೇಳಿ ತಾವೇ ಸುಳ್ಳು ಹೇಳುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳ ದೃಷ್ಟಿಯಲ್ಲಿ ಅಪ್ಪ – ಅಮ್ಮನಿಗೆ ಮಾನ್ಯತೆ ಸಿಗುವುದಿಲ್ಲ. ಮಕ್ಕಳಿಗೆ ಹೆತ್ತವರ ಮೇಲೆ ಗೌರವ ಇರಬೇಕಾದರೆ ಹೆತ್ತವರು ಕೂಡ ನಿಷ್ಠಾವಂತರಾಗಿರಬೇಕು.
ಗಂಡ – ಹೆಂಡತಿ ಇಬ್ಬರೂ ಮಕ್ಕಳ ಎದುರಿನಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅವಮಾನ ಮಾಡಿಕೊಳ್ಳಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲು ಕಾರಣವಾಗುತ್ತದೆ.
ಮಕ್ಕಳೆದುರು ತಂದೆ ಯಾವಾಗಲೂ ಶಿಸ್ತಿನಿಂದ ವರ್ತಿಸಬೇಕು. ತಂದೆ ಅಶಿಸ್ತಿನಿಂದ ವರ್ತಿಸಿದರೆ ಮಕ್ಕಳು ಅದೇ ಸ್ವಭಾವ ರೂಢಿಸಿಕೊಂಡು ಮುಂದೆ ದುರ್ನಡತೆ ಕಲಿಯುತ್ತಾರೆ. ಅಲ್ಲದೇ ಮಕ್ಕಳ ಸ್ವಭಾವಕ್ಕೆ ತಂದೆ – ತಾಯಿಯರೇ ಜವಾಬ್ದಾರರಾಗುತ್ತಾರೆ.