ಬೆಂಗಳೂರು : ಬೆಂಗಳೂರಿನಲ್ಲಿ ಘೋರ ಘಟನೆಯೊಂದು ಸಂಭವಿಸಿದ್ದು, 15 ನೇ ವರ್ಷಕ್ಕೆ ಮದುವೆಯಾದ ಬಾಲಕಿ 17 ನೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕಮ್ಮನಗೊಂಡಹಳ್ಳಿಯಲ್ಲಿ ನಡೆದಿದೆ.
ಪತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ 17 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವಕನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಳು. ಆದರೆ ಬಾಲಕಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಪತಿ ನೀಡಿದ ಕಿರುಕುಳಕ್ಕೆ ಆಕೆ ಸಾವಿನ ಕದ ತಟ್ಟಿದ್ದಾಳೆ.
ಘಟನೆ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ.